ಚಲನಚಿತ್ರ ಪ್ರಶಸ್ತಿ ಬಗ್ಗೆ ಸಾರ್ವಜನಿಕವಾಗಿ ಕಟು ಟೀಕೆ ಮಾಡುವಾಗ ಇತಿಮಿತಿ ಇರಬೇಕು. ಎಲ್ಲರಿಗೂ ಸಮಾಧಾನವಾಗುವಂತೆ ಪ್ರಶಸ್ತಿ ಕೊಡುವುದು ಕಷ್ಟ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯಚಾಮರಾಜೇ ಅರಸ್ ಹೇಳಿದರು.
ಚಿಲ್ಡ್ರನ್ಸ್ ಇಂಡಿಯಾ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸರ್ಕಾರ ನೇಮಿಸಿದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಪು ನೀಡಿದೆ. ಒಂದು ಸಾರಿ ತೀರ್ಪು ನೀಡಿದ ಮೇಲೆ ಅದನ್ನು ಸಾರ್ವಜನಿಕವಾಗಿ ಟೀಕಿಸುವಾಗ ಎಚ್ಚರ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಟೀಕೆ ಆರೋಗ್ಯಕರವಾಗಿರಬೇಕು ಎಂದರು.
ಪ್ರಶಸ್ತಿಯ ಬಗ್ಗೆ ಈ ರೀತಿ ಅಪಸ್ವರ ಎತ್ತಿದರೆ ತೀರ್ಪುಗಾರರಿಗೆ ಅಗೌರವ ತಂದಂತೆ, ಮುಂದಿನ ವರ್ಷಗಳಲ್ಲಿ ಪ್ರಶಸ್ತಿಯ ಗೌರವ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅರಸ್, ತೀರ್ಪಿನಲ್ಲಿ ಸರಿ, ತಪ್ಪುಗಳಿರಬಹುದು. ಎಲ್ಲರನ್ನೂ ಸಮಾಧಾನ ಮಾಡುವಂತಹ ತೀರ್ಪು ನೀಡುವುದು ಸಾಧ್ಯವಿಲ್ಲವೆಂದರು.
ಬಾಲಭವನದ ಆವರಣದಲ್ಲಿ ಪ್ರತಿ ಶನಿವಾರ-ಭಾನುವಾರ ಮಕ್ಕಳ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು. ಅಲ್ಲದೇ ಆಯಾ ಜಿಲ್ಲೆಗಳ ವಾರ್ತಾಭವನ, ಬಾಲಭವನಗಳಲ್ಲಿ ಮಕ್ಕಳ ಸಿನಿಮಾ ಪ್ರದರ್ಶ ನಡೆಸಲು ಅನುಕೂಲವಾಗುವಂತೆ ಪ್ರೊಜೆಕ್ಟರ್ ಒದಗಿಸಲು ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದರು.
|