ಇಂದಿನಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದತ್ತ ಇದೀಗ ಎಲ್ಲರ ಕಣ್ಣೂ ನೆಟ್ಟಿದೆ. ಗಡಿವಿವಾದದಿಂದ ನಲುಗಿರುವ ಈ ನಾಡಿನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ವಿಧಾನಸೌಧದಲ್ಲಿರುವ ಉಭಯ ಸದನಗಳಂತೆಯೇ ಎಲ್ಲವನ್ನೂ ಸಿದ್ಧಪಡಿಸಲಾಗಿದೆ. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಅಧಿವೇಶನ ನಡೆದಿತ್ತು. ಆಗಿನ ಲೋಪದೋಷಗಳನ್ನು ಈ ಸರ್ತಿ ಸರಿಪಡಿಸಲಾಗಿದೆ.
ಮಧ್ಯಾಹ್ನ 12.30ಕ್ಕೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಭಾಷಣ ಮಾಡಲಿದ್ದಾರೆ.ಪ್ರಶ್ನೋತ್ತರ ಅವಧಿ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಕಲಾಪ ಯಥಾವತ್ತಾಗಿ ನಡೆಯಲಿದೆ.
ಬೆಳಗಾವಿಯ ಅಧಿವೇಶನದಲ್ಲಿ ವಿವಿಧ ಮಸೂದೆಗಳು ಮಂಡನೆಯಾಗಲಿವೆ. ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಮಸೂದೆ, ಕರ್ನಾಟಕ ರಾಜ್ಯ ಬಾಡಿಗೆ(ತಿದ್ದುಪಡಿ) ಮಸೂದೆ, ಪಂಚಾಯತ್ ರಾಜ್(ತಿದ್ದುಪಡಿ) ಮಸೂದೆ ಹಾಗೂ ಬೆಂಗಳೂರು ನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಮಸೂದೆಗಳು ಸೇರಿದಂತೆ ಇತರ ಮಸೂದೆಗಳು ಮಂಡನೆಯಾಗಲಿವೆ.
ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಕತ್ತಿ ಮಸೆಯುತ್ತಿರುವ ಕಾರಣ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ ಕೋಲಾಹಲ ನಡೆಯಬಹುದು.
ವಿಧಾನ ಸಭೆಗೆ ಆರಂಗೇಟ್ರಂ ಮಾಡುತ್ತಿರುವ ನೂತನ ಶಾಸಕಿಯರಾದ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ಧರಾಜು ಅವರುಗಳು ಇದೇ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. |