ಎರಡು ರಾಜ್ಯಗಳ ಮಧ್ಯೆ ಖಾಸಗಿ ವಾಹನಗಳ ಸಂಚಾರ ಮಾಡಬೇಕಿದ್ದಲ್ಲಿ ಎರಡೂ ರಾಜ್ಯಗಳ ಸಾರಿಗೆ ಒಪ್ಪಂದ ಅಗತ್ಯ ಎಂದು ಹೈಕೋರ್ಟ್ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯ ಸಾರಿಗೆ ಪ್ರಾಧಿಕಾರಗಳ ಅನುಮತಿ ಪಡೆದರೆ ಸಾಲದು. ಬದಲಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅಂತಹ ವಾಹನ ಮಾಲೀಕರು ಸಾರಿಗೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯ ಎಂದು ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರಮಠ ಮತ್ತು ವೇಣುಗೋಪಾಲಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
ಕೇರಳ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಒಪ್ಪಂದ ಮಾಡಿಕೊಳ್ಳದೇ ಈ ಎರಡೂ ರಾಜ್ಯಗಳ ನಡುವೆ ಸಾರಿಗೆ ಸಂಚಾರ ನಡೆಸಲು ಉದ್ದೇಶಿಸಿದ್ದ ಕಾಸರಗೋಡಿನ ಸಾರಿಗೆ ಸಂಸ್ಥೆಯ ಮಾಲೀಕರಾದ ಸುಲೋಚನಾ ದಾಮೋದರ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಪೀಠ ಆ ಆದೇಶ ಹೊರಡಿಸಿದೆ.
ಎರಡೂ ರಾಜ್ಯಗಳ ಸಾರಿಗೆ ಒಪ್ಪಂದ ಅಗತ್ಯ ಎಂದು ತಿಳಿಸಿದ ಕೆಎಟಿ ಪರವಾನಗಿ ನವೀಕರಣ ಆದೇಶವನ್ನು ರದ್ದು ಮಾಡಿತ್ತು. ಕೆಎಟಿ ಆದೇಶವನ್ನು ಈಗ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. |