ರಾಜ್ಯದ ರೈತರನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ, ಭಯೋತ್ಪಾದನೆ ತಡೆಯಲು ಅಗತ್ಯ ಕ್ರಮ ಕೈಗೊಂಡು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಹೊಡೆತ ಅಭಿವೃದ್ದಿ ಕಾರ್ಯಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸಿ ಅಭಿವೃದ್ದಿ ಪಥದತ್ತ ಸಾಗಲು ಸರ್ಕಾರ ಬದ್ದವಾಗಿದೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಹೇಳಿದ್ದಾರೆ.ಅವರು ಶುಕ್ರವಾರ ಮಧ್ನಾಹ್ನ ಕುಂದಾನಗರಿಯಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯದ ತೆರಿಗೆ ಸಂಗ್ರಹಣೆ ನಿರೀಕ್ಷೆಗಿಂತ ಕಡಿಮೆಯಾಗಲಿದೆ. ಆದರೂ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ನೆರವು ನೀಡುವುದಕ್ಕೆ ಸರ್ಕಾರ ಪ್ರಯತ್ನಿಸಲಿದೆ ಎಂದರು. ಆಂತರಿಕ ಭದ್ರತೆ ಮತ್ತು ಸ್ಥಿರತೆ ವಿಷಯದಲ್ಲಿ ದೇಶ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್ ಕಂಟ್ರೋಲ್ ರೂಂ ಸ್ಥಾಪಿಸಿ,ಗುಪ್ತಚರ ಮತ್ತು ಆಂತರಿಕ ಭದ್ರತೆ ವಿಭಾಗಗಳ ಬಲವರ್ಧನೆ ಮಾಡಿ ಶಾಂತಿ-ಸುವ್ಯವಸ್ಥೆಗೆ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಅಲ್ಲದೇ ಎನ್‌ಎಸ್‌ಜಿ ಘಟವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.ಅಧಿವೇಶನ ಆರಂಭಕ್ಕೂ ಮುನ್ನ ರಾಣಿ ಚನ್ನಮ್ಮ ವೃತ್ತದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೆರವಣೆಗೆಯಲ್ಲಿ ಕರೆ ತರಲಾಯಿತು. ಡೊಳ್ಳು ಕುಣಿತ, ವಿವಿಧ ಕಲಾತಂಡಗಳ ನರ್ತನ ಹಾಗೂ ಸಾವಿರಾರು ಜನರು ಸುಮಾರು 3ಕಿ.ಮೀ.ತನಕ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆಗೂ ಮುನ್ನ ರಾಣಿ ಚನ್ನಮ್ಮ ಪ್ರತಿಮೆಗೆ ಮುಖ್ಯಮಂತ್ರಿಗಳು ಮಾಲಾರ್ಪಣೆ ಮಾಡಿದ್ದರು. |