ಮುಂಬರುವ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಲ್ಲುವ ಬಗ್ಗೆ ಇನ್ನು ಕೂಡ ತೀರ್ಮಾನಿಸಿಲ್ಲ. ರಾಜ್ಯದಲ್ಲಿ ಪ್ರವಾಸ ಮಾಡಿ ನನ್ನ ಪಕ್ಷದ ಅಭ್ಯರ್ಥಿಗಳಿಗೆ ಸಹಾಯ ಮಾಡಬೇಕೆಂದಿದ್ದೇನೆ. ಸ್ಪರ್ಧೆಗಿಳಿದರೆ ಬೇರೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ಎರಡು ರಾಜಕೀಯ ಪಕ್ಷಗಳ ನಡುವೆ ಚುನಾವಣೆ ಎದುರಿಸುವ ಅನಿವಾರ್ಯ ಪರಿಸ್ಥಿತಿ ಬಂದಿದೆ. ಹಾಗಾಗಿ ಚುನಾವಣೆಯಿಂದ ದೂರ ಉಳಿದು ಪಕ್ಷದ ಏಳಿಗೆಗೆ ಶ್ರಮಿಸುವತ್ತ ಚಿತ್ತ ಹರಿಸುವುದಾಗಿ ಹೇಳಿದ್ದಾರೆ.
ಯುಪಿಎ ಸರ್ಕಾರದಲ್ಲಿ ಕರ್ನಾಟಕಕ್ಕೆ ಏನೇನು ದ್ರೋಹವಾಗಿದೆ ಎಂಬುದನ್ನು ಜನರ ಮುಂದೆ ಹೇಳುತ್ತೇನೆ. 21 ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ. ಇದಕ್ಕೆ ಕಮ್ಯುನಿಸ್ಟ್ ಪಕ್ಷಗಳ ಸಹಕಾರವನ್ನು ಪಡೆಯುತ್ತೇನೆ. ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ತಮಗಿಷ್ಟವಿದೆ. ಆದರೆ ಆ ಪಕ್ಷದ ಮುಖಂಡರು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಏನಾಗುತ್ತೋ ಕಾದು ನೋಡೋಣ ಎಂದರು.
ಇದೇ ವೇಳೆ ನೈಸ್ ವಿವಾದದ ಸಂಬಂಧ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ದೇವೇಗೌಡರು, ವಿವಾದವು ನ್ಯಾಯಾಲಯದ ಮುಂದಿದೆ. ಮುಂದಿನ ತಿಂಗಳ ವರೆಗೆ ಈ ಬಗ್ಗೆ ಪ್ರಸ್ತಾಪ ಮಾಡಲಾರೆ ಎಂದಿದ್ದಾರೆ. |