'ಕುಂದಾ' ನಗರಿಯಲ್ಲಿ ಆರಂಭಗೊಂಡ ಎರಡನೇ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಭಾಷಣಕ್ಕೆ ಪ್ರತಿಪಕ್ಷಗಳು ತೀವ್ರ ಟೀಕಾಪ್ರಹಾರ ಹರಿಸಿವೆ.
ಉತ್ತರಕರ್ನಾಟಕಕ್ಕೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದ್ದರೂ ಕೂಡ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ ಇದೆಲ್ಲವೂ ಗಿಮಿಕ್ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಮೂಲಕ ಸರ್ಕಾರ ನೀಡಿರುವುದು ಕೇವಲ ಭರವಸೆ ಮಾತ್ರ, ಯಾವ ಅಭಿವೃದ್ಧಿ ಮಾಡಲಾಗಿದೆ, ಮುಂದೆ ಏನು ಮಾಡುತ್ತೇವೆ ಎಂಬ ಸ್ಪಷ್ಟ ಉಲ್ಲೇಖವೇ ಇಲ್ಲ. ಅಧಿವೇಶನ ಹೇಗೆ ನಾಮಕಾವಸ್ತೆಗಾಗಿ ಮಾಡಲಾಗಿದೆಯೋ ರಾಜ್ಯಪಾಲರ ಭಾಷಣ ಕೂಡ ನಾಮಕಾವಸ್ತೆಯದ್ದಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ನೀರಾವರಿ ಬಗ್ಗೆಯಾಗಲಿ, ವಿದ್ಯುಚ್ಚಕ್ತಿ ಬಗ್ಗೆಯೂ ಪ್ರಸ್ತಾಪ ಇಲ್ಲ, ಹಿಂದಿನ ಘೋಷಣೆಗಳನ್ನೇ ಇದೀಗ ಭಾಷಣದಲ್ಲಿ ಹೇಳಲಾಗಿದೆ ಎಂದು ದೂರಿದರು.
ಅದೇ ರೀತಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಪೊಳ್ಳು ಭರವಸೆಗಳು ಮತ್ತೊಮ್ಮೆ ಪುನರುಚ್ಚರಿಸಲಾಗಿದೆ ಎಂದು ಹೇಳಿದರು. |