ಟಿವಿ ವೀಕ್ಷಣೆ ಸಲುವಾಗಿಯೇ ಅಕ್ಕ-ತಂಗಿಯರ ನಡುವೆ ಜಟಾಪಟಿ ನಡೆದು ಅದು ತಾರಕ್ಕೇರಿದ ಪರಿಣಾಮ ಪಿಯು ವಿದ್ಯಾರ್ಥಿನಿಯೊಬ್ಬಾಕೆ ನೇಣಿಗೆ ಶರಣಾದ ಘಟನೆ ನಗರದ ಕೆ.ಪಿ.ಅಗ್ರಹಾರದಲ್ಲಿ ನಡೆದಿದೆ.
ಕೆ.ಪಿ.ಅಗ್ರಹಾರ ಟೆಲಿಕಾಂ ಲೇಔಟ್‌ನ 10ನೇ ಅಡ್ಡರಸ್ತೆಯ ನಿವಾಸಿ ಶೀತಲ್ ಮೃತಪಟ್ಟಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ ಆಕೆ ಪ್ರಥಮ ಪಿಯು ವಿದ್ಯಾರ್ಥಿನಿಯಾಗಿದ್ದಳು. ಆಕೆಯ ತಂಗಿ ಸುಪರ್ಣಾ ಅದೇ ವಿದ್ಯಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ.
ಕಾಲೇಜಿನಿಂದ ಸಂಜೆ ಮನೆಗೆ ಮರಳಿದ ಶೀತಲ್ ಮತ್ತು ಸುಪರ್ಣಾ ಇಬ್ಬರೂ ಟಿವಿ ನೋಡುತ್ತಿದ್ದರು. ಚಾನೆಲ್ ನೋಡುವ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ವಿಪರೀತಕ್ಕೆ ಹೋದಾಗ,ಸಿಟ್ಟುಗೊಂಡ ಶೀತಲ್ ಕೊಠಡಿಯೊಳಗೆ ಪ್ರವೇಶಿಸಿ ಬಾಗಿಲು ಹಾಕಿ ನೇಣಿಗೆ ಶರಣಾಗಿದ್ದಳು.
ಮನೆ ಕೆಲಸದ ನಂಜಮ್ಮ ಮಾರುಕಟ್ಟೆಗೆ ಹೋಗಿ ವಾಪಸು ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ತಂದೆ ಗುಪ್ತಚರ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಅವರ ಪತ್ನಿ ಚಂದ್ರಕಲಾ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದು, ಈ ಕಾರಣದಿಂದ ಕುಮಾರ್ ಅವರು ಒಂದು ತಿಂಗಳ ಕಾಲ ರಜೆ ಹಾಕಿ ಲಂಡನ್‌ಗೆ ತೆರಳಿದ್ದರು.
ಘಟನೆ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಶನಿವಾರ(ಇಂದು)ಬೆಳಿಗ್ಗೆ ಆಗಮಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |