ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ವಿಶೇಷ ಸಂದರ್ಭಗಳಲ್ಲಿ ಇನ್ನು ಮುಂದೆ ಅವಧಿಗೆ ಮುನ್ನ ಬಿಡುಗಡೆ ಮಾಡಕೂಡದು ಎಂದು ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.ವಿವಿಧ ಸೆರೆಮನೆಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಲು ಅನುಮತಿ ನೀಡಿರುವ 'ಅಪರಾಧ ದಂಡ ಪ್ರಕ್ರಿಯೆ ಸಂಹಿತೆ ನಿಯಮ 2007' ರದ್ದು ಮಾಡಿ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರಮಠ ಹಾಗೂ ವೇಣುಗೋಪಾಲ ಗೌಡ ಅವರನ್ನು ಒಳಗೊಂಡ ವಿಭಾಗೀಯ ಪೀಠ ತೀರ್ಪು ನೀಡಿದೆ.ಈ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಒಳಗಾದಿದ್ದ ಕೈದಿಗಳ ಬಿಡುಗಡೆ ಪ್ರಕರಣ ಕೊನೆಗೂ ಅಂತ್ಯ ಕಂಡಂತಾಗಿದೆ. ಕನಿಷ್ಠ ಐದು ವರ್ಷ ಶಿಕ್ಷೆ ಅನುಭವಿಸಿರುವ ಮಹಿಳೆಯರು ಮತ್ತು ಕನಿಷ್ಠ ಏಳು ವರ್ಷ ಶಿಕ್ಷೆ ಅನುಭವಿಸಿದ ಪುರುಷರು ಈ ಅವಧಿ ಮುಗಿದ ತಕ್ಷಣ ಬಿಡುಗಡೆಗೊಳ್ಳುತ್ತಾರೆ ಎಂಬ ತಪ್ಪು ಅಭಿಪ್ರಾಯವನ್ನು ಈ ನಿಯಮ ಮೂಡಿಸುತ್ತಿದೆ. ಇದು ಸರಿಯಲ್ಲ ಎಂದು ಪೀಠ ಹೇಳಿದೆ.ಗಣರಾಜ್ಯೋತ್ಸವ ಸಂದರ್ಭದಲ್ಲಿ ಉತ್ತಮ ನಡತೆಯ 375 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದು, ಪೀಠ ವಿಚಾರಣೆಯನ್ನು ಮುಂದೂಡಿದೆ. |