ಗಣಿಗಾರಿಕೆ, ಗಣಿ ಉದ್ಯಮದ ಅರಿವಿಲ್ಲದೆ 'ಗಣಿ ರಾಷ್ಟ್ರೀಕರಣ' ಮಾಡಬೇಕೆಂದು ಬೊಬ್ಬೆ ಹೊಡೆಯುತ್ತಿರುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರೊಬ್ಬ ಮೂರ್ಖರು ಅಂತಹವರ ಬಗ್ಗೆ ಹೇಳುವುದು ಏನು ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅನಂತಮೂರ್ತಿ ಎಂತಹ ಸಾಹಿತಿ ಎಂದು ಎಲ್ಲರಿಗೂ ಗೊತ್ತಿದೆ, ಅವರ ಬಗ್ಗೆ ಮಾತನಾಡುವಂಥದ್ದು ಏನು ಇಲ್ಲ ಎಂದು ರೆಡ್ಡಿ ಜರೆದರು.ಶೋಷಿತರ ಬಗ್ಗೆ ಜೆಡಿಎಸ್ ನಡೆಸುತ್ತಿರುವ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸುವುದೂ ಇಲ್ಲ. ನೀಚ ವ್ಯಕ್ತಿಗಳು ಮತ್ತು ಮೂರ್ಖರ ಬಗ್ಗೆ ಪುಣ್ಯ ಕ್ಷೇತ್ರಗಳಲ್ಲಿ ಮಾತನಾಡುವುದು ಸರಿಯಲ್ಲ. ನಾಡಿನ ಜನರಿಗೆ ಇಂಥವರ ಬಗ್ಗೆ ಹೆಚ್ಚಿಗೆ ತಿಳಿದಿದೆ ಎಂದರು. ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅನಂತಮೂರ್ತಿ ಮತ್ತು ಜೆಡಿಎಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೀತಿ ಇದಾಗಿತ್ತು.ಬಳ್ಳಾರಿ ಜಿಲ್ಲೆಯೊಂದರಿಂದಲೇ ಸುಮಾರು 1 ಲಕ್ಷ ಜನ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಜೆಡಿಎಸ್ ಮುಖಂಡರೇ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ರೆಡ್ಡಿ, ಜೆಡಿಎಸ್ ನೀಚರ ಬಗ್ಗೆ ಮಾತನಾಡುವುದಿಲ್ಲ ಎಂದರು. |