ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಸರ್ಕಾರ ಮತ್ತು ಪಕ್ಷವನ್ನು ಜತೆಯಾಗಿಯೇ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಲೋಕಸಬಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತಿದೆ ಎಂಬ ಟೀಕೆ ಮಾಡಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನವನ್ನು ಬಿಜೆಪಿ ಸಮಾವೇಶ ಎಂಬ ರೀತಿಯಲ್ಲಿ ಟೀಕೆ ಮಾಡಿವೆ. ಇಂತಹ ಟೀಕೆಗಳಲ್ಲಿ ಅರ್ಥವಿಲ್ಲ, ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎಂದು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು. ಬರುವ ಫೆಬ್ರುವರಿಯಲ್ಲಿ ನಾನು ಬಜೆಟ್ ಮಂಡಿಸುತ್ತಿದ್ದೇನೆ. ಆ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತದೆ. ಈ ಅಧಿವೇಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು, ಆ ಎಲ್ಲಾ ಅಂಶಗಳನ್ನು ನಾನು ಬಜೆಟ್‌ನಲ್ಲಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ. ನಂಜುಂಡಪ್ಪ ವರದಿಗೂ ಸರ್ಕಾರ ಪ್ರಯತ್ನ ಮಾಡುತ್ತಿದೆ. ಪ್ರತಿಪಕ್ಷಗಳು ಈ ವಿಚಾರದಲ್ಲಿ ಇನ್ನಷ್ಟು ಸಲಹೆ ನೀಡಿದರೆ ಅದನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತದೆ. ಪ್ರತಿಪಕ್ಷಗಳ ಸಲಹೆ ಅತ್ಯಂತ ಮಹತ್ವವಾಗಿದೆ. ಅದನ್ನು ಅವರು ಸಹ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಏಳು ತಿಂಗಳ ಸಾಧನೆಯನ್ನು ತಿಳಿಸಲಾಗಿದೆ. ಅದರ ಜೊತೆಗೆ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಕೂಡಾ ತಿಳಿಸಲಾಗಿದೆ. ಬಜೆಟ್‌ನಲ್ಲಿ ರೂಪಿಸುವ ಎಲ್ಲವನ್ನೂ ರಾಜ್ಯಪಾಲರ ಭಾಷಣದಲ್ಲಿ ಹೇಳಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದ ಯೋಜನಾ ಗಾತ್ರ ಕುಸಿಯಲು ಅವಕಾಶ ನೀಡುವುದಿಲ್ಲ ಎಂದರು. |