ಕರ್ನಾಟಕ ರಕ್ಷಣಾ ವೇದಿಕೆಯಿಂದ ಜ.17-18ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 7ನೇ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ನಡೆಸುವುದಾಗಿ ತಿಳಿಸಿದೆ.ಶನಿವಾರ ಸಂಜೆ 6.30 ರಿಂದ ರಾತ್ರಿ 12 ರವರೆಗೆ ಜನಪದ, ಲಾವಣಿ, ನಾಟಕ, ಕುಣಿತ ಕಾರ್ಯಕ್ರಮಗಳು ನಡೆಯಲಿವೆ. 18 ರಂದು ಬೆಳಗ್ಗೆ ಉದ್ಯೋಗ-ಉದ್ಯಮಶೀಲತೆ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.ಕಾರ್ಮಿಕ ಸಚಿವ ಬಚ್ಚೇಗೌಡ, ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಜಾನಪದೋತ್ಸವ ಮತ್ತು ವಿವಿಧ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ. ಪ್ರಶಸ್ತಿ 50 ಸಾವಿರ ನಗದು ಹಾಗೂ ಅರ್ಧ ಕೆ.ಜಿ ಬೆಳ್ಳಿ ಫಲಕ ಹೊಂದಿದೆ.ಸಮಾವೇಶದಲ್ಲಿ ಕೊಡಗು ಜಿಲ್ಲೆಗೆ ರೈಲು ಸಂಪರ್ಕ, ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ 371ನೇ ಕಲಂ ತಿದ್ದುಪಡಿ ಸೇರಿದಂತೆ ಸಮಗ್ರ ಕರ್ನಾಟಕದ ಬೆಳವಣಿಗೆಗೆ 42ಕ್ಕೂ ಹೆಚ್ಚು ನಿರ್ಣಗಳನ್ನು ಕೈಗೊಳ್ಳಲಾಗುವುದು. ಬೇಡಿಕೆಗಳ ಈಡೇರಿಕೆ ವೇದಿಕೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.ಸಮಾವೇಶದಲ್ಲಿ ಕೇವಲ 15 ಸಾವಿರ ಜನ ಮಾತ್ರ ಭಾಗವಹಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಆದರೆ, ವೇದಿಕೆಯಲ್ಲಿ 40 ಲಕ್ಷ ನೋಂದಾಯಿತ ಕಾರ್ಯಕರ್ತರಿದ್ದಾರೆ. ಸುಮಾರು 50 ಸಾವಿರ ಜನ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿದರು. |