ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ನಗರದ ಲಾಲ್‌ಭಾಗ್‌ನಲ್ಲಿ ಜ.17 ರಿಂದ 26ರವರೆಗೆ ಗಣರಾಜ್ಯೋತ್ಸವ ಅಂಗವಾಗಿ ಫಲ ಪುಷ್ಪ ಪ್ರದರ್ಶನ ನಡೆಯಲಿದೆ.ಪ್ರತಿ ವರ್ಷ ನಡೆಯುವ ಈ ಫಲ ಪುಷ್ಪ ಪ್ರದರ್ಶನ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ಸುಮಾರು 250ಕ್ಕೂ ಅಧಿಕ ಜಾತಿಯ ಹೂ ಗಿಡಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಳಿಗಾಲದಲ್ಲಿ ಹೂ ಬಿಡುವ ಅಪರೂಪದ ಹೂಗಳನ್ನೂ ವೀಕ್ಷಿಸಬಹುದು. ಭಯೋತ್ಪಾದನೆಯ ಭೀತಿ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ನಿರ್ದೇಶಕ ಡಾ.ಜಿ.ಕೆ.ವಸಂತಕುಮಾರ್ ತಿಳಿಸಿದ್ದಾರೆ.ಗಾಜಿನ ಮನೆಯಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನ ಶನಿವಾರ 3 ಗಂಟೆಗೆ ಉದ್ಘಾಟನೆಯಾಗಲಿದೆ. ಇನ್ನೊಂದೆಡೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪ ಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ ಕಲೆಗಳ ಸ್ಪರ್ಧಾ ಪ್ರದರ್ಶನಕ್ಕೆ ಜ.18ರಂದು ಮಧ್ಯಾಹ್ನ 3 ಗಂಟೆಗೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಚಾಲನೆ ನೀಡಲಾಗುತ್ತದೆ. ಜ.24 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಶಾಲಾ ಮಕ್ಕಳಿಗೆ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶ ನೀಡಲಾಗುವುದು ಎಂದು ಅವರು ಹೇಳಿದರು.ಲಾಲ್ಬಾಗ್ ಸುತ್ತ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಪ್ರವೇಶದ್ವಾರದಲ್ಲಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ , ಗುಪ್ತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಪ್ರದರ್ಶನದ ವೀಕ್ಷಣೆಗೆ ಬರುವವರು ಕೈ ಚೀಲ ಅಥವಾ ತಿನ್ನುವ ಪದಾರ್ಥಗಳನ್ನು ತೆಗೆದುಕೊಂಡು ಬರುವಂತಿಲ್ಲ. ಫಲಪುಷ್ಪ ಪ್ರದರ್ಶನ ಸಂಜೆ 7 ಗಂಟೆವರೆಗೆ ವೀಕ್ಷಣೆಗೆ ಮುಕ್ತವಾಗಿರುತ್ತದೆ. |