ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಮರಾಠಿಗರ ಮೇಲೆ ಹಲ್ಲೆ ನಡೆಸಿದರೆ ಮುಂಬೈಯಲ್ಲಿರುವ ಕನ್ನಡಿಗರ ಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮದಾಸ್ ಕದಂ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯ ಹುತಾತ್ಮ ಚೌಕದಲ್ಲಿ ಶನಿವಾರ ನಡೆಸಿದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರಾಮದಾಸ್ ಕದಂ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈಯಲ್ಲಿ ಕನ್ನಡಿಗರ ಹೋಟೆಲ್‌ಗಳಿವೆ, ಅವುಗಳಲ್ಲಿ ನಾವು ಊಟ ಮಾಡುತ್ತೇವೆ. ಆದರೆ ಒಂದು ವೇಳೆ ಕರ್ನಾಟಕದಲ್ಲಿರುವ ಮರಾಠಿಗರ ಮೇಲೆ ಹಲ್ಲೆ ನಡೆಸಿದರೆ, ನಾವು ಊಟ ಮಾಡುವ ಹೋಟೆಲ್‌ಗಳು ಹೊತ್ತಿ ಉರಿಯಲಿವೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಕರ್ನಾಟಕ ಬಿಜೆಪಿ ಸರ್ಕಾರ ನಡೆಸಿರುವ ದೌರ್ಜನ್ಯವನ್ನು ಎಲ್.ಕೆ.ಆಡ್ವಾಣಿಯವರಲ್ಲಿ ನಮ್ಮ ಪಕ್ಷದ ನಾಯಕರು ಈಗಾಗಲೇ ಪ್ರಸ್ತಾಪಿಸಿದ್ದಾರೆ. ಹೀಗೆಯೇ ದೌರ್ಜನ್ಯ ಮುಂದುವರಿದರೆ ತಮ್ಮ ಪಕ್ಷದೊಳಗಿನ ಮೈತ್ರಿಯನ್ನು ಕಡಿದುಕೊಳ್ಳುವುದಾಗಿ ಆಡ್ವಾಣಿ ಅವರೊಂದಿಗಿನ ಮಾತುಕತೆ ವೇಳೆ ಬಾಳಠಾಕ್ರೆ ಮತ್ತು ಉದ್ದವ್ ಠಾಕ್ರೆ ಎಚ್ಚರಿಸಿರುವುದಾಗಿ ಹೇಳಿದರು.
ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಹಾಮೇಳ ನಡೆಸಿಯೇ ತಿರುತ್ತೇವೆ ಎಂದು ಎಂಇಎಸ್ ಹಠ ಹಿಡಿದಿತ್ತಾದರೂ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿಲ್ಲವಾಗಿತ್ತು. ಆದರೂ ಬೆಳಗಾವಿಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಸೇನೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ವೇದಿಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.
ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ:
ಗಡಿವಿವಾದದ ವಿಚಾರಣೆ ಸರ್ವೊಚ್ಛ ನ್ಯಾಯಾಲಯದಲ್ಲಿ ಇರುವಂತೆಯೇ ಹಾಗೂ ಕಳೆದ ಐವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ, ಇದೀಗ ಅಧಿವೇಶನ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ಕದಂ ತಿಳಿಸಿದ್ದಾರೆ.
ಕರ್ನಾಟಕದ ಗಡಿಭಾಗದಲ್ಲಿ ಮರಾಠಿಗರ ಪ್ರಾಬಲ್ಯ ಹೊಂದಿರುವ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಎಂಇಎಸ್‌ನ ಬಹುಕಾಲದ ಬೇಡಿಕೆಯಾಗಿದೆ, ಈ ವಿವಾದ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ಸರ್ಕಾರ ಮರಾಠಿ ಮಾತನಾಡುವವರ ಸಾಂವಿಧಾನಿಕ ಹಕ್ಕನ್ನು ಧಮನಿಸುತ್ತಿರುವುದಾಗಿ ಆರೋಪಿಸಿರುವ ರಾಜ್ಯಸಭಾ ಸದಸ್ಯ ಭರತ್ ಕುಮಾರ್ ರಾವುತ್, ನ್ಯಾಷನಲ್ ಕಾಂಗ್ರೆಸ್ (ಎನ್‌ಸಿಪಿ) ಹಾಗೂ ಕಾಂಗ್ರೆಸ್ ಸಂಸದರು ಕೂಡಲೇ ರಾಜೀನಾಮೆ ನೀಡುವಂತೆ ಶಿವಸೇನೆ ಆಗ್ರಹಿಸುವುದಾಗಿ ಕಿಡಿಕಾರಿದರು. |