ಶಿವಸೇನಾ ಮುಖಂಡ ಬಾಳಠಾಕ್ರೆ ಹೇಳುವಂತೆ ಮರಾಠಿಗರ ಮೇಲೆ ದಬ್ಬಾಳಿಕೆ ಮಾಡಿಲ್ಲ. ಇಲ್ಲಿನ ಜನರ ನಡುವೆ ಇರುವ ಸುಮಧುರ ಬಾಂಧವ್ಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರು ಮತ್ತು ಕನ್ನಡಿಗರು ಒಂದೇ ತಾಯಿ ಮಕ್ಕಳು ಎಂಬಂತೆ ಅಣ್ಣ-ತಮ್ಮಂದಿರ ರೀತಿಯಲ್ಲಿ ಬಾಳುತ್ತಿದ್ದಾರೆ. ಇಂತಹ ಸಂಬಂಧವನ್ನು ಹಾಳು ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಲ್ಲಿನ ಜನತೆಯ ಬಾಂಧವ್ಯವನ್ನು ಹಾಳು ಮಾಡುವ ರೀತಿಯಲ್ಲಿ ರಾಜಕೀಯ ಮಾಡುವುದು ಅಗತ್ಯವಿಲ್ಲ. ಅದನ್ನು ಠಾಕ್ರೆಯಂತಹ ಹಿರಿಯರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದು ಬೇಡವೆಂಬ ಕಾರಣದಿಂದಾಗಿಯೇ ಮಹಾಮೇಳಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿನ ಜನರ ಭಾವನೆಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮಹಾಮೇಳ ನಡೆಸಲಿ. ಏನೇ ಆದರೂ ಇಲ್ಲಿನ ಕನ್ನಡಿಗರ ಹಾಗೂ ಮರಾಠಿಗರ ನಡುವೆ ಸುಮಧುರ ಭಾವನೆ ಉಳಿಯಬೇಕು ಎಂದರು. |