ಮಹಾರಾಷ್ಟ್ರದ ಲಾತೂರಿನಲ್ಲಿ ಕೆಎಸ್‌ಆರ್‌ಟಿಸಿಗೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿರುವ ಮರಾಠಿಗರು, ಗಡಿಭಾಗದಲ್ಲಿರುವ ಬೀದರ್ ಸಮೀಪದ ದೇವಣಿ ತಾಲೂಕಿನಲ್ಲಿ ಎರಡು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶಿವಸೇನೆ ಮತ್ತು ಛಾವಾ ಸಂಘಟನೆಯ ಕಾರ್ಯಕರ್ತರು ಹುಮ್ನಾಬಾದ್ ಡಿಪೋಗೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಸಂಜೆ ಲಾತೂರಿನ ರಾಜೀವಗಾಂಧಿ ವೃತ್ತದ ಸಮೀಪ ಛಾವಾ ಸಂಘಟನೆಯ ಅಧ್ಯಕ್ಷ ಅಣ್ಣಾ ಸಾಹೇಬ್ ಜಾವಳೆ ಅವರ ನೇತೃತ್ವದಲ್ಲಿ ಬಸ್ ತಡೆದು, ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದರು.
ಚಾಲಕ ಧೂಳಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಾರಾಷ್ಟ್ರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಬೆಂಕಿ ಆರಿಸುವ ಪ್ರಯತ್ನ ಸಫಲವಾಗಲಿಲ್ಲ.
ಗಡಿಯಾಚೆ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಗಡಿಭಾಗವಾದ ಬೀದರ್, ಔರಾದ್, ಹುಮ್ನಾಬಾದ್,ಭಾಲ್ಕಿ ಮತ್ತು ಬಸವಕಲ್ಯಾಣ ಡಿಪೋದ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಯಾಣ ಮಾಡುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. |