ನಮಗೆ ಕುರ್ಚಿ ಮುಖ್ಯ ಅಲ್ಲ. ಈ ನಾಡಿನ ನೆಲ ಜಲ ಮುಖ್ಯ. ಕನ್ನಡಿಗರ ರಕ್ಷಣೆಗೆ ನಾವು ಎಂದಿಗೂ ಬದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ರಾಜ್ಯದ ಸಮಗ್ರ ಅಭಿವೃದ್ದಿಗೆ ಬದ್ಧವಾಗಿರುವ ನಮ್ಮ ಸರ್ಕಾರ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡವನ್ನು ಅನುಷ್ಠಾನಗೊಳಿಸುವುದಕ್ಕಾಗಿ '2009ನ್ನು ಕನ್ನಡ ಜಾಗೃತಿ ವರ್ಷ' ಎಂದು ಆಚರಿಸುತ್ತಿರುವುದಾಗಿ ಹೇಳಿದರು.ಕನ್ನಡವೇ ಜಾತಿ, ಧರ್ಮ ಮತ್ತು ದೇವರು ಎಂದು ನಂಬಿರುವ ಕರ್ನಾಟಕ ರಕ್ಷಣಾ ವೇದಿಕೆ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ದಿಸೆಯಲ್ಲಿ ಹೋರಾಟ ಮಾಡುತ್ತಿರುವ ಕರವೇ ನಾಡಿಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿದೆ ಎಂದು ಯಡಿಯೂರಪ್ಪ ಶ್ಲಾಘಿಸಿದರು.ಅಂತಾರಾಜ್ಯ ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕು. ಗಣಿಗಾರಿಕೆ ರಾಯಲ್ಟಿಯ ಅತಿ ಹೆಚ್ಚು ಪಾಲು ರಾಜ್ಯಕ್ಕೆ ದೊರೆಯಬೇಕು. ಶಾಸ್ತ್ರೀಯ ಕನ್ನಡದ ಅಧ್ಯಯನಕ್ಕೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಗಣಿಗಾರಿಕೆ ನೆಪದಲ್ಲಿ ಕನ್ನಡಿಗರ ನೆಲ ಕಬಳಿಸಿ ಲೂಟಿಗೈಯುತ್ತಿರುವ ಶಕ್ತಿಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಶೇ 90 ಪಾಲು ಕನ್ನಡಿಗರಿಗೆ ಮೀಸಲಿಡಬೇಕು ಎನ್ನುವುದು ಸೇರಿದಂತೆ ಸಮಾವೇಶದಲ್ಲಿ 42 ನಿರ್ಣಯಗಳನ್ನು ಕೈಗೊಳ್ಳಲಾಯಿತು. |