ಉಪಚುನಾವಣೆ ಗೆಲುವಿನಿಂದ ಬೀಗುತ್ತಿರುವ ಬಿಜೆಪಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ದೃಷ್ಟಿಯಿಂದ ಮತ್ತೊಮ್ಮೆ ಆಪರೇಷನ್ ಕಮಲ ನಡೆಸುವ ಸುಳಿವು ನೀಡಿದೆ.
ರಾಜ್ಯದ 14 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಸಭೆ ನಡೆಸಲಾಯಿತು. ಜನವರಿ 27 ರಂದು ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಪಕ್ಷ ಗೆಲ್ಲುವ ದೃಷ್ಟಿಯಿಂದ ಅಗತ್ಯ ಬಿದ್ದರೆ ಬೇರೆ ಪಕ್ಷಗಳಿಂದ ನಾಯಕರನ್ನು ಸೆಳೆದುಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ, ಕನಿಷ್ಠ 25 ಕ್ಷೇತ್ರ ಗೆಲ್ಲುವ ಗುರಿ ನಮ್ಮದು. ಗೆಲ್ಲಬಲ್ಲ ಅಭ್ಯಥಿಗಳು ಬೇರೆ ಪಕ್ಷದಲ್ಲಿದ್ದರೆ ಬಿಜೆಪಿಗೆ ಆಹ್ವಾನಿಸಲು ಹಿಂದೇಟು ಹಾಕುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದರೆ ಸದಾ ಸ್ವಾಗತ. ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸುತ್ತಾರೋ ಅಲ್ಲಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಊಹಾಪೋಹವು ಕೇಳಿಬರುತ್ತಿದೆ.
ಬಳ್ಳಾರಿ ಕ್ಷೇತ್ರದಿಂದ ಸಚಿವ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಗಣಿ ರಾಜಕಾರಣಿಗಳಲ್ಲಿ ಒಬ್ಬರು ರಾಷ್ಟ್ರರಾಜಕಾರಣದತ್ತ ಚಿತ್ತ ನೆಟ್ಟಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ನಿವೃತ್ತ ನ್ಯಾ. ವೆಂಕಟಾಚಲ ಅವರ ಹೆಸರು ಚಾಲ್ತಿಯಲ್ಲಿದೆ. ಉಡುಪಿಯಿಂದ ಡಿ.ವಿ.ಸದಾನಂದ ಗೌಡ ಸ್ಪರ್ಧಿಸುವುದು ದಟ್ಟವಾಗಿದೆ.
|