ತಮ್ಮ ಪುತ್ರನನ್ನು ರಾಜಕೀಯಕ್ಕಿಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದು, ಇದರಿಂದ ಪಕ್ಷದ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಹಾಗೂ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆಯುವ ಮೂಲಕ ಅವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದಾಗಿ ಪಕ್ಷದ ವಲಯದೊಳಗೆ ಊಹಾಪೋಹ ಹರಿದಾಡತೊಡಗಿದೆ.
ಯಡಿಯೂರಪ್ಪ ಅವರ ಹಿರಿಯ ಪುತ್ರ ರಾಘುವೇಂದ್ರ ಅವರಿಗೆ ಟಿಕೆಟ್ ನೀಡುವುದಕ್ಕೆ ಶಿವಮೊಗ್ಗ ಬಿಜೆಪಿ ಘಟಕವೂ ತೀವರ್ರ ವಿರೋಧ ವ್ಯಕ್ತಪಡಿಸಿದೆ. ತಮ್ಮ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಯಡಿಯೂರಪ್ಪ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಭ್ಯರ್ಥಿಗಳ ಪಟ್ಟಿ ಸಿದ್ಧತೆಯಲ್ಲಿ ಸದಾನಂದ ಗೌಡರು ತೊಡಗಿದ್ದ ಸಂದರ್ಭದಲ್ಲಿ, ಪಟ್ಟಿಯಲ್ಲಿ ಪುತ್ರನ ಹೆಸರು ಸೇರಿಸುವಂತೆ ಯಡಿಯೂರಪ್ಪ ಸೂಚಿಸಿದರು. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂಬ ಸಲಹೆಯನ್ನು ಡಿವಿಎಸ್ ಮುಂದಿಟ್ಟಾಗ, ಸಿಟ್ಟುಗೊಂಡ ಯಡಿಯೂರಪ್ಪ ಕೈಯಲ್ಲಿದ್ದ ಪೇಪರ್ ಅನ್ನು ಟೇಬಲ್ ಮೇಲೆ ಎಸೆದರು ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಇದರೊಂದಿಗೆ ಅನೇಕ ವರ್ಷಗಳಿಂದ ಆಪ್ತರಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದ ಗೌಡರ ನಡುವೆ ಮನಸ್ತಾಪಕ್ಕೆ ಎಡೆ ಮಾಡಿಕೊಟ್ಟಿದೆ. |