ಗಡಿವಿವಾದದ ಕಿಚ್ಚು ಮತ್ತೆ ಹೊತ್ತಿಕೊಂಡ ಪರಿಣಾಮ ಭಾನುವಾರ ಬೀದರ್ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ವೊಂದಕ್ಕೆ ಶಿವಸೇನೆ ಕಾರ್ಯಕರ್ತರು ಬೆಂಕಿ ಹಚ್ಚಿದ ಪರಿಣಾಮವಾಗಿ, ಮಹಾರಾಷ್ಟ್ರಕ್ಕೆ ತೆರಳುವ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.
ಭಾನುವಾರ ಮಹಾರಾಷ್ಟ್ರದ ಲಾತೂರಿನಲ್ಲಿ ಕೆಎಸ್‌ಆರ್‌ಟಿಸಿಗೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿರುವ ಮರಾಠಿಗರು, ಗಡಿಭಾಗದಲ್ಲಿರುವ ಬೀದರ್ ಸಮೀಪದ ದೇವಣಿ ತಾಲೂಕಿನಲ್ಲಿ ಎರಡು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದರು.
ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶಿವಸೇನೆ ಮತ್ತು ಛಾವಾ ಸಂಘಟನೆಯ ಕಾರ್ಯಕರ್ತರು ಹುಮ್ನಾಬಾದ್ ಡಿಪೋಗೆ ಸೇರಿದ ಬಸ್‌ಗೆ ಬೆಂಕಿ ಹಚ್ಚಿದ್ದರು.
ಭಾನುವಾರ ಸಂಜೆ ಲಾತೂರಿನ ರಾಜೀವಗಾಂಧಿ ವೃತ್ತದ ಸಮೀಪ ಛಾವಾ ಸಂಘಟನೆಯ ಅಧ್ಯಕ್ಷ ಅಣ್ಣಾ ಸಾಹೇಬ್ ಜಾವಳೆ ಅವರ ನೇತೃತ್ವದಲ್ಲಿ ಬಸ್ ತಡೆದು, ಪ್ರಯಾಣಿಕರನ್ನು ಕೆಳಗಿಳಿಸಿ ಈ ಕೃತ್ಯ ಎಸಗಿದ್ದರು.
ಗಡಿಭಾಗವಾದ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು ಪಡಿಸಿದ ಪರಿಣಾಮ ಜನಸಾಮಾನ್ಯರು ಪರದಾಡುವಂತಾಗಿದೆ.
ಬಸ್ ಇಲ್ಲದ ಕಾರಣದಿಂದಾಗಿ ಗಡಿಭಾಗವಾದ ನಿಪ್ಪಾಣಿಯಲ್ಲಿ ಜನರು ಕಾಲ್ನಡಿಗೆಯಲ್ಲಿ ತೆರಳಿ ಮಹಾರಾಷ್ಟ್ರ ತಲುಪಿ ಅಲ್ಲಿಂದ ವಾಹನಗಳಿಂದ ತಮ್ಮ ಸ್ಥಳಗಳಿಗೆ ಹೋಗುತ್ತಿರುವ ದೃಶ್ಯ ಕಂಡುಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬೀದರ್ ಮತ್ತು ಯಾದಗಿರ್ ಜನರು ಶೋಲಾಪುರಕ್ಕೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ನೂರಾರು ಜನರು ಪರದಾಡುವಂತಾಯಿತು. ಅದೇ ರೀತಿ, ಲಾತೂರ್, ಅಕ್ಕಾಲ್‌ಕೋಟ್ ಗಡಿಭಾಗದ ಕೊಲ್ಲಾಪುರ್, ಸಾಂಗ್ಲಿ ಪೂನಾ ಮತ್ತು ಬೆಳಗಾಂ ಭಾಗದ ಜನರು ತೊಂದರೆಗೀಡಾದರು.
ಪರಿಸ್ಥಿತಿ ಹತೋಟಿಗೆ ಬಂದ ಕೂಡಲೇ ಗಡಿಭಾಗದಲ್ಲಿ ಎಂದಿನಂತೆ ಬಸ್ ಸಂಚಾರವನ್ನು ಮುಂದುವರಿಸಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ಇಂದು ಸದನಕ್ಕೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ ಸಚಿವರು, ಅದೇ ರೀತಿ ಕರ್ನಾಟಕದಲ್ಲೂ ಮಹಾರಾಷ್ಟ್ರದ ವಾಹನಗಳಿಗೆ ರಕ್ಷಣೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಅದೇ ರೀತಿ ಮಹಾರಾಷ್ಟ್ರ ಸರಕಾರಿ ಬಸ್ (ಎಂಎಸ್ಆರ್ಟಿಸಿ) ಕೂಡ ಸುಮಾರು 150 ಟ್ರಿಪ್ ಸಂಚಾರ ರದ್ದುಗೊಳಿಸಿದ್ದು, ಕಳೆದ ಎರಡು ದಿನಗಳಲ್ಲಿ ಸಂಸ್ಥೆಗೆ ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ಎಂಎಸ್ಆರ್ಟಿಸಿ ಪಿಆರ್ಒ ಮುಕುಂದ್ ದಾಸ್ ತಿಳಿಸಿದ್ದಾರೆ. |