ಭಾರತ ಧಾರ್ಮಿಕ ಮನೋಭಾವವುಳ್ಳ ದೇಶ, ಈ ಹಿಂದೆ ಜಗತ್ತಿಗೆ ಅಹಿಂಸೆ, ಶಾಂತಿಯ ಸಂದೇಶವನ್ನು ಸಾರಿದ ಭಾರತ 21ನೇ ಶತಮಾನದಲ್ಲೂ ಅದನ್ನು ಮತ್ತಷ್ಟು ಪ್ರಭಾವಶಾಲಿಯಾಗಿ ಎಲ್ಲೆಡೆ ಸಾರಬೇಕಾಗಿದೆ ಎಂದು ಬೌದ್ದ ಧರ್ಮದ ಗುರು, ನೊಬೆಲ್ ಪುರಸ್ಕೃತ ದಲೈಲಾಮಾ ಅವರು ಸೋಮವಾರ ಕರೆ ನೀಡಿದ್ದಾರೆ.
ಅವರು ಗುಲ್ಬರ್ಗ ಸೇಡಂನಲ್ಲಿ ನಿರ್ಮಿಸಿದ್ದ ಬುದ್ದ ವಿಹಾರದಲ್ಲಿ ಚಿನ್ನ ಲೇಪಿತ ಭಗವಾನ್ ಬುದ್ದನ ಪ್ರತಿಮೆ ಅನಾವರಣ ಮತ್ತು ಗೋಪುರ ಕಳಸದ ಅನಾವರಣ, ಸ್ತೂಪದ ಉದ್ಘಾಟನೆ ನೆರೆವೇರಿಸಿದ ಅವರು, ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.
ಭಾರತ 20ನೇ ಶತಮಾನದಲ್ಲಿ ಗಾಂಧೀಜಿ ಮೂಲಕ ಅಹಿಂಸಾ ತತ್ವವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿತ್ತು. ವಿದೇಶಗಳ ಹಲವು ನಾಯಕರು ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಅನುಸರಿಸಿದ್ದರು.
ಇದೀಗ ಪಾಶ್ಚಿಮಾತ್ಯ ದೇಶಗಳಲ್ಲಿ ಬುದ್ದಿಜೀವಿಗಳು, ವಿಜ್ಞಾನಿಗಳು ಬೌದ್ದ ಧರ್ಮದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ದಲೈಲಾಮ ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ದಲೈಲಾಮ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಮಲ್ಲಿಕಾರ್ಜುನ ಖರ್ಗೆ,ಧರಂಸಿಂಗ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಶ್ರೀರವಿಶಂಕರ ಗುರೂಜಿ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. |