ಬೆಳಗಾವಿ: ಬಿಎಂಐಸಿ ವಿವಾದ ಸದನದಲ್ಲಿ ಮತ್ತೆ ಪ್ರತಿಧ್ವನಿಸಿದೆ. ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಯ ವೇಳೆ, ಬಿಎಂಐಸಿ ವಿವಾದ ಆರಂಭವಾಗಿದ್ದೇ ದೇವೇಗೌಡರಿಂದ ಎನ್ನುತ್ತಿದ್ದಂತೆಯೇ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಬಿಎಂಐಸಿ ಆರಂಭವಾದಾಗ ಇದ್ದ ಸಂಸ್ಥೆಗಳೇ ಬೇರೆ, ಈಗ ಇರುವ ಸಂಸ್ಥೆಗಳೇ ಬೇರೆ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ದೇವೇಗೌಡರೇ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸುತ್ತಾರೆ. ನ್ಯಾಯಾಲಯದಲ್ಲಿರುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಸಭೆಯಲ್ಲಿ ಇಲ್ಲದ ದೇವೇಗೌಡರ ಹೆಸರನ್ನು ಇಲ್ಲಿ ಪ್ರಸ್ತಾಪಿಸಬೇಡಿ. ಪ್ರಕರಣವನ್ನು ಸಿಬಿಐಗೆ ಕೊಟ್ಟುಬಿಡಿ. ಈ ವಿಷಯದಲ್ಲಿ ನಾವು ಚರ್ಚೆಗೆ ಸಿದ್ದರಿದ್ದೇವೆ ಎಂದು ರೇವಣ್ಣ ಹರಿಹಾಯ್ದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಇಲ್ಲಿ ಚರ್ಚೆ ಬೇಡ ಉಪಸಭಾಧ್ಯಕ್ಷ ಬೋಪಯ್ಯ ಸೂಚಿಸಿದರು. |