ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡಲು ಸ್ವಾಮಿ ವಿವೇಕಾನಂದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಲ್.ಹನುಮಂತಯ್ಯ ಆರೋಪಿಸಿದ್ದಾರೆ.
ಸ್ವಾಮಿ ವಿವೇಕಾನಂದರು ಎಂದೂ ಕೂಡಾ ಹಿಂದೂ ಮೂಲಭೂತವಾದ ಬೆಂಬಲಿಸಿರಲಿಲ್ಲ. ನಿಜವಾದ ಹಿಂದೂ ಧರ್ಮ ಪ್ರತಿಪಾದಿಸಿದವರು. ಆದರೆ, ಬಿಜೆಪಿ ಇಂದು ಅವರ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದೆ ಎಂದು ದೂರಿದರು.
ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡಿರುವ ಭಯೋತ್ಪಾದನಾ ಜಾಗೃತಿ ಅಭಿಯಾನವನ್ನು ಬಿಜೆಪಿ ಅಂಗ-ಸಂಸ್ಥೆಗಳಾದ ಎಬಿವಿಪಿ ಹಾಗೂ ಆರ್ಎಸ್ಎಸ್‌ಗೆ ವಹಿಸಲಾಗಿದೆ. ಸರ್ಕಾರದ ಅನಧಿಕೃತ ಘಟಕಗಳಾಗಿ ಅವು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿ ಕಾಂಗ್ರೆಸ್, ವಿದ್ಯಾರ್ಥಿ ಜೆಡಿಎಸ್, ಎಸ್ಎಫ್ಐ ಮತ್ತಿತರರ ಸಂಘಟನೆಗಳನ್ನು ಜತೆಗೂಡಿಸಿ ಕೊಳ್ಳದೆ ಮಾಡುತ್ತಿರುವ ಅಭಿಯಾನ ಕೇಸರೀಕರಣದ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿ ದುಡ್ಡಿನ ಮದ ಏರಿಸಿಕೊಂಡಿರುವ ಸಚಿವ ಜನಾರ್ದನ ರೆಡ್ಡಿ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಗೆ ಸಾಕ್ಷಿ. ಮುಖ್ಯಮಂತ್ರಿ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಬುದ್ದಿಜೀವಿಗಳು ಎಂದೂ ದೇಶದ್ರೋಹಿ ಕೆಲಸ ಮಾಡಿಲ್ಲ. ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವವರು ಅನಂತಮೂರ್ತಿ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದರು. |