ಗಡಿನಾಡಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದ ನಾಲ್ಕನೇ ದಿನವಾದ ಮಂಗಳವಾರ ಸದನದಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷವಾದ ಕಾಂಗ್ರೆಸ್ ಮುಖಂಡರು ಆರ್ಎಸ್‌ಎಸ್ ವಿರುದ್ಧ ಮಾಡಿದ ಆರೋಪ ಕೋಲಾಹಲವನ್ನೇ ಸೃಷ್ಟಿಸಿತು.
ಕಾಂಗ್ರೆಸ್‌ನ ಡಿ.ಬಿ.ಜಯಚಂದ್ರ ಅವರು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಕರಾವಳಿ ಪ್ರದೇಶದಲ್ಲಿ ಗೃಹಸಚಿವರು ಆರ್‌ಎಸ್‌ಎಸ್‌ನ ರಿಮೋಟ್ ಕಂಟ್ರೋಲ್‌ನಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಆಪಾದಿಸಿದರು.
ಏತನ್ಮಧ್ಯೆ ಮಧ್ಯಪ್ರವೇಶಿಸಿ ಮಾತನಾಡಿದ ಮೂಡುಬಿದರೆ ಶಾಸಕ ಅಭಯಚಂದ್ರ ಅವರು, ಆರ್‌ಎಸ್‌ಎಸ್ ದೇಶದ್ರೋಹಿ ಸಂಘಟನೆ ಎಂದು ಗಂಭೀರವಾಗಿ ಆರೋಪಿಸಿದಾಗ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸದಸ್ಯರುಗಳ ನಡುವೆ ವಾಕ್ಸಮರ ನಡೆಯಿತು.
ಬಿಜೆಪಿಯ ಈಶ್ವರಪ್ಪ, ಸಿ.ಟಿ.ರವಿ, ಹರತಾಳು ಹಾಲಪ್ಪ, ಶಂಕರಮೂರ್ತಿ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಮುಖಂಡರ ವಿರುದ್ದ ಹರಿಹಾಯ್ದರಲ್ಲದೆ, ಪ್ರತಿಪಕ್ಷಗಳ ಸದಸ್ಯರು ಕೂಡ ಸದನದ ಬಾವಿಯತ್ತ ತೆರಳಿ ಗೊಂದಲ ಎಬ್ಬಿಸಿದರು.
ಸ್ಪೀಕರ್ ಜಗದೀಶ್ ಶೆಟ್ಟರ್ ಅವರು, ಸದನದಲ್ಲಿ ಗಂಭೀರ ಚರ್ಚೆ ಆಗಬೇಕೆ ವಿನಃ, ಯಾವುದೇ ಒಬ್ಬ ವ್ಯಕ್ತಿ, ಸಂಘಟನೆಯನ್ನು ಅವಹೇಳನ ಮಾಡಬಾರದು, ದಯವಿಟ್ಟು ತಮ್ಮ ಸ್ಥಳಗಳಿಗೆ ತೆರಳಿ ಎಂದು ಶಾಸಕರು, ಸಚಿವರಿಗೆ ಪದೇ, ಪದೇ ಮನವಿ ಮಾಡಿಕೊಂಡರು ಕೂಡ ಗಲಾಟೆ ಹೆಚ್ಚತೊಡಗಿದಾಗ, ಒಂದು ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಆದರೂ ಕೋಲಾಹಲ ಹೆಚ್ಚಿದ ಪರಿಣಾಮ ಸ್ಪೀಕರ್ ಶೆಟ್ಟರ್ ಅವರು ಸದನದ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ರಕ್ಷಣೆ ಕೋರಿದ ಆಡಳಿತಾರೂಢ ಶಾಸಕರು: ಸದನದ ಕಲಾಪದಲ್ಲಿ ಆಡಳಿತಾರೂಢ ಪಕ್ಷದ ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇ ಗೌಡರು ಹಾಗೂ ಭದ್ರಾವತಿಯ ಬಿ.ಕೆ.ಸಂಗಮೇಶ್ವರ್ ಅವರು ತಮಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಸ್ಪೀಕರ್ ಆಗ್ರಹಿಸಿ ಧರಣಿ ನಡೆಸಿದಾಗ ,ಸದನದಲ್ಲಿ ಆಡಳಿತಾರೂಢ ಸದಸ್ಯರೇ ತಬ್ಬಿಬ್ಬಾದರು.
ಈ ಸಂದರ್ಭದಲ್ಲೇ ಮಾತನಾಡಿದ ಕಾಂಗ್ರೆಸ್‌ನ ಜಯಚಂದ್ರ ಅವರು, ಆಡಳಿತಾರೂಢ ಶಾಸಕರೇ ರಕ್ಷಣೆ ಕೋರುತ್ತಿದ್ದಾರೆಂದರೆ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬ ಬಗ್ಗೆ ಚರ್ಚೆ ಆಗಲೇಬೇಕು ಎಂದು ಒತ್ತಾಯಿಸುತ್ತಿದ್ದಂತೆಯೇ, ಅಭಯ್ ಚಂದ್ರ ಅವರು ಆಡಿದ ಮಾತಿನಿಂದಾಗಿ ಸದನದ ಚರ್ಚೆಯ ದಿಕ್ಕು ತಪ್ಪಿತ್ತು. |