ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ ಎಂದು ವಿರೋಧ ಪಕ್ಷಗಳಿಗೆ ಸವಾಲು ಹಾಕಿರುವ ಸಚಿವ ಜನಾರ್ದನ ರೆಡ್ಡಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ, ರೆಡ್ಡಿ ಇನ್ನೂ ಬಚ್ಚಾ, ಅವರ ಉದ್ದಟತನದ ವರ್ತನೆಗೆ ಮುಖ್ಯಮಂತ್ರಿಗಳು ಕಡಿವಾಣ ಹಾಕಲಿ, ಇಲ್ಲದಿದ್ದರೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ ವಿರೋಧ ಪಕ್ಷದವರು ಬಳ್ಳಾರಿಗೆ ಬಂದರೆ ನೋಡಿಕೊಳ್ಳುತ್ತೇವೆ ಎಂಬ ಬೆದರಿಕೆ ಹಾಕಿದ್ದಕ್ಕೆ ಪ್ರತಿಯಾಗಿ ಅವರು ಕಿಡಿಕಾರಿದ್ದಾರೆ.ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣೆಗೆ ಬಂದು ನಿಲ್ಲಲಿ ಎಂದು ಸವಾಲು ಹಾಕಿರುವುದು ಅವರ ರಾಜಕೀಯ ಉದ್ದಟತನ ಎಂದಿರುವ ಅವರು, ಸೋನಿಯಾ ಬಳ್ಳಾರಿಗೆ ಬಂದು ಸ್ಪರ್ಧಿಸಿದಾಗ ರೆಡ್ಡಿ ಸೋದರರು ಆ ವೇಳೆ ರಾಜಕಾರಣದಲ್ಲಿ ಬಚ್ಚಾಗಳಾಗಿದ್ದರು. ಅವರ ಬಗ್ಗೆ ಮಾತನಾಡುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.ಬೆಳಗಾವಿ ಅಧಿವೇಶನವನ್ನು ಕಣ್ಣೊರೆಸುವ ತಂತ್ರ ಎಂದು ಬಣ್ಣಿಸಿದ ದೇಶಪಾಂಡೆ, ಯಾವುದೇ ಸ್ಪಷ್ಟ ಉದ್ದೇಶ, ಗುರಿ, ಪೂರ್ವಯೋಜನೆ ಇಲ್ಲದ ಅಧಿವೇಶನ ಇದಾಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ ಈಡೇರುವುದಿಲ್ಲ ಎಂದರು.ಕಾನೂನು ಸುವ್ಯವಸ್ಥೆ, ಹಣಕಾಸು ನಿರ್ವಹಣೆ ಮತ್ತು ಆಡಳಿತ ನಿಭಾಯಿಸುವಲ್ಲಿ ಸಂಪೂರ್ಣವಾಗಿ ಸರ್ಕಾರ ವಿಫಲವಾಗಿದ್ದು, ಸರ್ಕಾರದ ವಿಫಲತೆಗಳನ್ನು ಜನತೆಯ ಮುಂದಿಡಲು ಮಾಜಿ ಸಭಾಪತಿ ಬಿ.ಕೆ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಆಡಳಿತ ವೈಫಲ್ಯಗಳ ಬಗ್ಗೆ ಶ್ವೇತ ಪತ್ರ ಹೊರಡಿಸುವುದಾಗಿ ತಿಳಿಸಿದರು. |