ಗಡಿನಾಡಲ್ಲಿ ನಡೆಯುತ್ತಿರುವ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಗಣಿ ವಿವಾದವೇ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ-ಆಂಧ್ರ ಗಡಿಯಲ್ಲಿ ಗಣಿಗಾರಿಕೆ ಸಂಬಂಧಿಸಿದಂತೆ ಭೂ ಒತ್ತುವರಿ ನಡೆದಿದೆ ಎಂಬ ಆರೋಪದ ಕುರಿತು ಕೇಂದ್ರದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ಅಭ್ಯಂತರವೇನೂ ಇಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ವಿಧಾನಪರಿಷತ್‌ನಲ್ಲಿ ಸಮ್ಮತಿ ಸೂಚಿಸಿದ್ದಾರೆ.
ಓಬಳಾಪುರಂ ಗಣಿ ಕಂಪೆನಿ ಮಾಲೀಕ ನಾನು. ಕೆಲ ಆರೋಪಗಳ ಹಿನ್ನೆಲೆಯಲ್ಲಿ,ನಾನು ಗಣಿಗಾರಿಕೆ ನಡೆಸುವ ಪ್ರದೇಶವನ್ನು ಪರಿಶೀಲಿಸಿದ ಆಂಧ್ರಪ್ರದೇಶದ ಸರ್ವಪಕ್ಷ ಸಮಿತಿಯು, ಒಂದಿಚೂ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡಿದೆ ಅವರು ಹೇಳಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗ ಲೋಕಾಯುಕ್ತ ವರದಿ ಬರಲು ಕಾರಣ ನಾನೇ. 150 ಕೋಟಿ ರೂಪಾಯಿಗಳ ಗಣಿ ಭ್ರಷ್ಟಾಚಾರ ಆರೋಪವನ್ನು ನಾನು ಮಾಡಿದ ಹಿನ್ನೆಲೆಯಲ್ಲಿಯೇ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ ಎಂದು ಸಮರ್ಥನೆ ನೀಡಿದರು.
ಬಲ್ದೋಟಾ ಕಂಪನಿಯವರನ್ನು ಮೈನ್ಸ್‌ನ ವೀರಪ್ಪನ್ ಎಂದು ಬಳ್ಳಾರಿ ಜಿಲ್ಲೆಯಲ್ಲಿ ಕರೆಯಲಾಗುತ್ತದೆ. ಬಳ್ಳಾರಿಯಲ್ಲಿ 78 ಸಂಸ್ಥೆಗಳು ಗಣಿಗಾರಿಕೆಯಲ್ಲಿ ತೊಡಗಿವೆ. ಆದರೆ, ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಬಲ್ದೋಟಾ ಕಂಪೆನಿಯ ಬಗೆಗೆ ಮಾತ್ರ ಮಾತನಾಡಿದ್ದಾರೆ ಎಂದು ರೆಡ್ಡಿ ಕಟುವಾಗಿ ಟೀಕಿಸಿದರು. |