ಬೆಂಗಳೂರು: ಕಳೆದ ಐದು ದಿನಗಳಿಂದ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಆಡಳಿತಾರೂಢ ಬಿಜೆಪಿಯ ವಿರುದ್ಧ ಹರಿಹಾಯ್ದರೂ, 'ದೂರ್ವಾಸ ಮುನಿ'ಯಂತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದ್ದಕ್ಕಿದ್ದ ಹಾಗೆ ತಣ್ಣಗಾಗಿದ್ದಾರೆ.
ವಿರೋಧ ಪಕ್ಷದವರ ಒಂದು ನುಡಿಗೂ ಕಿಡಿ ಕಾರುತ್ತಿದ್ದ ವಿರೋಧಿಗಳ ಮೈ ಮೇಲೆ ಬೀಳುವಂತೆ ಹಾರಾಡುತ್ತಿದ್ದ ಹಾಗೂ ವಾರಗಳ ಹಿಂದೆಯಷ್ಟೆ ತಮ್ಮ ವಿರುದ್ಧ ಮಾತನಾಡಿದವರನ್ನೆಲ್ಲಾ ಕೋರ್ಟಿಗೆ ಎಳೆದೊಯ್ಯುವ ಕೂಗು ಹಾಕುತ್ತಿದ್ದ ಯಡಿಯೂರಪ್ಪ ಇದ್ದಕ್ಕಿದ್ದಂತೆ ಮೆತ್ತಗಾಗಿರುವುದನ್ನು ನೋಡಿ ವಿಧಾನಸಭೆಯ ಸದಸ್ಯರು ಮಾತ್ರವಲ್ಲ ಜನಸಾಮಾನ್ಯರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಗಣಿ ವಿವಾದ, ಆರ್‌ಎಸ್‌ಎಸ್ ಬಗ್ಗೆಯೂ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಕೋಲಾಹಲ ಎಬ್ಬಿದ್ದರು. ಎಲ್ಲದಕ್ಕು ಮೌನಕ್ಕೆ ಶರಣಾದ ಯಡಿಯೂರಪ್ಪ ಶಾಸಕ ಸಂಗಮೇಶ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸಿಓಡಿಗೆ ಒಪ್ಪಿಸಬೇಕು ಎನ್ನುವ ಬೇಡಿಕೆಗೆ ಒಪ್ಪಿಗೆ ಸೂಚಿಸಿದರು.
ಅಲ್ಲದೆ, ಪ್ರತಿಪಕ್ಷಗಳ ಮೇಲೆ ಕಿಡಿಕಾರಿದ ಆಡಳಿತ ಪಕ್ಷಗಳ ನಾಯಕರಿಗೆ ಯಡಿಯೂರಪ್ಪ ಬುದ್ದಿ ಹೇಳಿದರು. ಜತೆಗೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದ ಗಣಿಧಣಿಗಳಿಗೆ ಬುದ್ದಿವಾದ ಹೇಳಿದರು. ಈ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರೆ ಇತ್ತೀಚೆಗೆ ಕೋಪ ಮಾಡಿಕೊಳ್ಳುವುದನ್ನೇ ಬಿಟ್ಟಿದ್ದೇನೆ ಎಂದರಂತೆ. ಒಟ್ಟಿನಲ್ಲಿ ಮುಖ್ಯಮಂತ್ರಿಗಳ ಸಾಧುತನ ಮಾತ್ರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿರುವುದಂತು ಸುಳ್ಳಲ್ಲ. |