ಗಡಿನಾಡಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದ ಆರನೇಯ ದಿನವಾದ ಬುಧವಾರ ಉಭಯ ಸದನಗಳಲ್ಲೂ ಗಣಿ ಕೋಲಾಹಲ ತಾರಕ್ಕೇರಿ, ಆರೋಪ-ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಟ್ಟಿತು.
ಏತನ್ಮಧ್ಯೆ ಗಣಿಗಾರಿಕೆಗೆ ಅನುಮತಿ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯಿಂದ ತನಿಖೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೇ ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲಾರೆ ಎಂದು ಸ್ಪಷ್ಟಪಡಿಸಿದ ಅವರು, ಅಗತ್ಯ ಬಿದ್ದರೆ, ಅಧಿಕಾರ ಬಿಡಲೂ ಸಿದ್ದ ಎಂದರು.
ಮಂಗಳವಾರ ನಡೆದ ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಉತ್ತರಿಸಿ ಈ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ವಿವರ ಒದಗಿಸಲು ಮುಂದಾದರು.
ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್, ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಆಳ್ವಿಕೆಯಲ್ಲಿ ಒಟ್ಟು 109 ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಗಣಿಗಾರಿಕೆಗೆ ಅನುಮತಿ ಪಡೆದವರಲ್ಲಿ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಅವರ ಪುತ್ರ ಹಾಗೂ ಕಾರ್ತಿಕ್ ಘೋರ್ಪಡೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಂತ ಮಾಜಿ ಸಂಸದ ಮಂಜುನಾಥ ಕುನ್ನೂರು ಅವರ ಹೆಸರನ್ನು ಹೇಳುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ತೀವ್ರ ವಾಗ್ದಾಳಿ ನಡೆಸುವ ಮೂಲಕ ಗದ್ದಲಕ್ಕೆ ಕಾರಣವಾಯಿತು.
ಹೇಳುವುದಾದರೆ ಎಲ್ಲಾ 109 ಮಂದಿ ಹೆಸರನ್ನು ಹೇಳಿ ಅದನ್ನು ಬಿಟ್ಟು ಆಯ್ದ ಕೆಲವರ ಹೆಸರನ್ನು ಹೇಳುವುದು ಸರಿಯಲ್ಲ ಎಂದು ಜೆಡಿಎಸ್‌ನ ಎಂ.ಸಿ.ನಾಣಯ್ಯ, ಕಾಂಗ್ರೆಸ್ ನಾಯಕ ಉಗ್ರಪ್ಪ ಸೇರಿದಂತೆ ಹಲವು ಸದಸ್ಯರು ಟೀಕಾ ಪ್ರಹಾರ ನಡೆಸಿದರು.
ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕೂಡ ಎದ್ದು ನಿಂತು ಮುಖ್ಯಮಂತ್ರಿಗಳು ಉತ್ತರ ನೀಡುವಂತೆ ಆಗ್ರಹಿಸಿದಾಗ ಮತ್ತೆ ಕೋಲಾಹಲ ನಡೆಯಿತು. ಈ ಗೊಂದಲದ ನಡುವೆಯೂ ಸದನ ಸಮಿತಿಯಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
|