ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಬುಧವಾರ ಮಧ್ನಾಹ್ನ ನಡೆದ ಕಲಾಪದಲ್ಲಿ ಮತ್ತೆ ಗಣಿ ಲಂಚ ಸ್ವೀಕಾರದ ಆರೋಪ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಯಿತು.ಹಾಲಿ ಸಚಿವರಾದ ಜನಾರ್ದನ ರೆಡ್ಡಿಯವರು, ಬಿಜೆಪಿಯಿಂದ ದೂರವಾದ ಸಂದರ್ಭದಲ್ಲಿ ತಾವು ಜೆಡಿಎಸ್ ಸೇರುವುದಾಗಿ ಹೇಳಿದ್ದರಲ್ಲದೇ, ಅದಕ್ಕಾಗಿ 200 ಕೋಟಿ ರೂ.ನೀಡುವುದಾಗಿ ಆಮೀಷ ಒಡ್ಡಿದ್ದರು ಎಂದಾಗ ರೆಡ್ಡಿ ಸಹೋದರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ, ಕುಮಾರಸ್ವಾಮಿ ಅವರು ಗಣಿಗಾರಿಕೆಯ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರು.ಬಳ್ಳಾರಿಯಿಂದ ಆಂಧ್ರಪ್ರದೇಶಕ್ಕೆ ಪ್ರತಿದಿನ 10 ಸಾವಿರ ಟನ್ ಪರವಾನಿಗೆ ಇಲ್ಲದೆ ಅದಿರು ಸಾಗಾಟವಾಗುತ್ತದೆ, ಅದಕ್ಕೆ ಅನುಮತಿ ಇದೆಯಾ ಎಂಬ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಬೇಕಾಗಿದೆ.ಬಳ್ಳಾರಿಯಲ್ಲಿ ಪಾಳೇಗಾರಿಕೆ ಮಾಡುತ್ತಲೇ ಬಂದಿರುವ ರೆಡ್ಡಿ ಸಹೋದರರಿಂದಾಗಿ, ಇಂದು ಹೈಕೋರ್ಟ್ ನೀಡಿದ ತೀರ್ಪನ್ನು ಕೂಡ ಅಧಿಕಾರಿಗಳು ಪಾಲಿಸದಿರುವಂತಹ ಸ್ಥಿತಿ ಬಂದೊಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: 150 ಕೋಟಿ ರೂಪಾಯಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಯಾವ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಸಿ, ಅದರಲ್ಲಿ ತಪ್ಪಿತಸ್ಥ ಎಂದಾದರೆ ಗಲ್ಲಿಗೇರಿಸಿ ಎಂದು ಕುಮಾರಸ್ವಾಮಿ ಹೇಳಿದರು. ರೆಡ್ಡಿ ತಿರುಗೇಟು: ಕುಮಾರಸ್ವಾಮಿ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ನೀವು ಮುಖ್ಯಮಂತ್ರಿಯಾಗಿದ್ದವರು ಸುಳ್ಳು ಹೇಳಬಾರದು, ಸದನದಲ್ಲಿ ಸತ್ಯವನ್ನೇ ಹೇಳಿ, ಅದಕ್ಕೆ ಉತ್ತರ ಕೊಡಲು ನಾನು ಸಿದ್ದ. ನೀವು ಹೇಳುವ ಬೆಡ್ ರೂಂ ಕಥೆಯನ್ನು (ಜೆಡಿಎಸ್ ಸೇರ್ಪಡೆ) ಈ ರಾಜ್ಯದ ಜನತೆ ಒಪ್ಪುವುದಿಲ್ಲ. ನಾನು ಗಣಿ ಲಂಚದ ಆರೋಪ ಮಾಡಿದ ಸಂದರ್ಭದಿಂದ ಹಿಡಿದು, ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷದ ನಿಷ್ಠೆಯಿಂದ ಇದ್ದೇನೆ. ಆಗಲೂ ಹೇಳಿದ್ದೆ, ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದರೂ ಕೂಡ ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವುದಾಗಿ ಹೇಳಿದ್ದೆ.ಅಲ್ಲದೇ 150ಕೋಟಿ ರೂ.ಗಣಿ ಲಂಚದ ಆರೋಪಕ್ಕೆ ಈಗಲೂ ಬದ್ದನಿದ್ದೇನೆ. ಅದಕ್ಕೆ ಸಂಬಂಧಿಸಿದ 9 ಸಿಡಿ, ದಾಖಲೆಗಳನ್ನು ಸರ್ವೋಚ್ಚನ್ಯಾಯಾಲಯಕ್ಕೆ ಒಪ್ಪಿಸಿದ್ದೇನೆ. ನಾನು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ ಎಂದರು.ಈಗ ಮತ್ತೆ ಎದ್ದು ನಿಂತ ಕುಮಾರಸ್ವಾಮಿ, ಸಾಕ್ಷಿ ತೋರಿಸಿ, ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದಾಗ, ಸಾಕ್ಷಿ ಎಲ್ಲವೂ ಇದೆ, ಅದೆಲ್ಲವನ್ನು ಕೋರ್ಟ್‌ಗೆ ಒಪ್ಪಿಸಿದ್ದೇನೆ ಎಂದು ರೆಡ್ಡಿ ಹೇಳಿದರು. |