ವಿಧಾನಸಭೆ ನಿರ್ಮಾತೃ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಜನ್ಮ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಕೆಂಗಲ್ ಅವರ ಜನ್ಮ ಶತಮಾನೋತ್ಸವ ಆಚರಣೆ ಸಂಬಂಧ ಈಗಾಗಲೇ ಅವರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಈ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಸೂಕ್ತ ರೀತಿಯಲ್ಲಿ ಆಚರಣೆಯನ್ನು ಮಾಡಲಾಗುವುದೆಂದು ಅವರು ಹೇಳಿದರು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಡಿ.ಕೆ.ಶಿವಕುಮಾರ್ ಅವರು ಮಾಡಿದ ಪ್ರಸ್ತಾವನೆಗೆ ಉತ್ತರಿಸಿದ ಸಚಿವರು, ಹನುಮಂತಯ್ಯನವರ ಆಚಾರ-ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯಕ್ರಮಗಳನ್ನು ಶತಮಾನೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಿವಕುಮಾರ್ ಬರುವ ಫೆಬ್ರುವರಿ 10ಕ್ಕೆ ಹನುಮಂತಯ್ಯನವರ ಜನ್ಮ ಶತಮಾನೋತ್ಸವ ಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ಅವರ ಸವಿನೆನಪಿಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಇದಕ್ಕೆ ಸರ್ಕಾರ ಕನಿಷ್ಠ 5ಕೋಟಿ ರೂಪಾಯಿ ಮೀಸಲಿಡಬೇಕು ಎಂದರು. |