ಉಡುಪಿಯಲ್ಲಿ ಸಿಓಡಿ ಪೊಲೀಸರು ಬಂಧಿಸಿದ್ದ ಶಂಕಿತ ಉಗ್ರಗಾಮಿ ಅಕ್ಬರ್ ಅಲಿಯನ್ನು ಇತ್ತೀಚೆಗೆ ಸಿಓಡಿ ಪೊಲೀಸರು ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ಕರೆತಂದು ವಿಚಾರಣೆ ನಡೆಸಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಪ್ರಸ್ತುತ ಶಿವಮೊಗ್ಗ ಜೈಲಿನಲ್ಲಿರುವ ಮತ್ತೋರ್ವ ಶಂಕಿತ ಉಗ್ರ ಸೈರೋಜ್‌ನ ಶಿಕಾರಿಪುರದ ಮನೆಗೆ ಅಕ್ಬರ್ ಅಲಿಯನ್ನು ಸಿಓಡಿ ಡಿವೈಎಸ್‌ಪಿ ಸುರೇಶ್ಚಂದ್ರ ನೇತೃತ್ವದ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭಿಸಿವೆ. ದೇಶದ ಮೋಸ್ಟ್ ವಾಟೆಂಡ್ ಉಗ್ರ ರಿಯಾಜ್ ಭಟ್ಕಳ ಹಾಗೂ ಕಬಾಡಿಯಾ ಜೊತೆ ನೇರ ಸಂಪರ್ಕ ಅಕ್ಬರ್ ಅಲಿಗೆ ಇತ್ತು ಎಂದು ಪೊಲೀಸ್ ಮೂಲಗಳು ಶಂಕಿಸಿವೆ.
ಈ ಕುರಿತು ಮಾಹಿತಿ ಸಂಗ್ರಹಿಸಿದ್ದ ಸಿಓಡಿ ಪೊಲೀಸರು ಜ.16ರಂದು ಅಕ್ಬರ್ ಅಲಿಯನ್ನು ಉಡುಪಿಯ ಹೆಬ್ರಿಯ ಸಮೀಪ ಬಂಧಿಸಿದರು. ಈತ ರಿಯಾಜ್ ಭಟ್ಕಳ ಜೊತೆಗೆ ನೇರ ಸಂಪರ್ಕ ಹೊಂದಿದ್ದ, ಜೊತೆಗೆ ಕರಾವಳಿ ಪ್ರದೇಶದ ವಿವಿಧ ಭಾಗಗಳಲ್ಲಿ ನಡೆದ ಕೋಮುಗಲಭೆಗಳಿಗೆ ಕುಮ್ಮುಕ್ಕು ನೀಡಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |