ಗಣಿ ಹಗರಣ ಕುರಿತಂತೆ ಒಂದೂವರೆ ವರ್ಷ ಕಾಲ ಸಂಸ್ಥೆಯ ಅಧಿಕಾರಿಗಳು, ವಿಶೇಷ ತನಿಖಾ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಕಷ್ಟಪಟ್ಟು ತನಿಖೆ ನಡೆಸಿ ಸಿದ್ದಪಡಿಸಿದ ವರದಿಗೆ ತದ್ವಿರುದ್ದವಾಗಿ ರಾಜ್ಯ ಸರ್ಕಾರ ಪ್ರತ್ಯೇಕ ವರದಿ ಸಿದ್ದಪಡಿಸಿದ್ದಕ್ಕೆ ಲೋಕಾಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಲೋಕಾಯುಕ್ತದ ಮೇಲೆ ಸರ್ಕಾರಕ್ಕೆ ವಿಶ್ವಾಸ ಇಲ್ಲದಿದ್ದರೆ, ಇತರ ಪ್ರಕರಣಗಳನ್ನು ವಾಪಸು ಪಡೆಯಲಿ ಎಂದು ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕಾಯುಕ್ತ ಸಂತೋಷ ಹೆಗ್ಡೆ ಕಿಡಿಕಾರಿದ್ದಾರೆ.ಅಷ್ಟೆಲ್ಲಾ ಶ್ರಮ ವಹಿಸಿ ವರದಿ ತಯಾರಿಸಿದ ಮೇಲೆಯೂ, ಸರ್ಕಾರ ಮತ್ತೊಂದು ವರದಿಯನ್ನು ಅದರ ಮೇಲೆ ಹೇರುತ್ತಿದೆ, ನಾವೇನು ತಮಾಷೆಗೆ ಕೆಲಸ ಮಾಡುತ್ತಿದ್ದೇವಾ?ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಅಕ್ರಮ-ಗಣಿಗಾರಿಕೆ ಕುರಿತ ಮಧ್ಯಂತರ ವರದಿಯಲ್ಲಿ ಕರ್ನಾಟಕ-ಆಂಧ್ರಪ್ರದೇಶ ಅಂತಾರಾಜ್ಯ ಗಡಿಯಲ್ಲಿ ನಡೆದಿರುವ ಒತ್ತುವರಿ ಬಗ್ಗೆ ಕೇಂದ್ರ ಸರ್ಕಾರದಿಂದ ಜಂಟಿ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಮೂರ್ತಿ ಹೆಗ್ಡೆ ಶಿಫಾರಸು ಮಾಡಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಜಿ.ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ನಿರ್ದೇಶಕರಾಗಿರುವ ಓಬಳಾಪುರಂ ಮೈನಿಂಗ್ ಕಂಪೆನಿ ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಪ್ರತ್ಯೇಕ ವರದಿ ರೂಪಿಸಿದ್ದು, ಸಚಿವರ ಕಂಪೆನಿಯನ್ನು ಆರೋಪ ಮುಕ್ತಗೊಳಿಸಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. |