ಬೆಳಗಾವಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹೊಂದಿಕೊಂಡಿರುವ ಹಲಗಾ-ಬಸ್ತವಾಡ ಗ್ರಾಮದ ಬಳಿ 130 ಎಕರೆಜಾಗದಲ್ಲಿ ತಲೆಎತ್ತಲಿರುವ ನೂತನ ಸುವರ್ಣ ಸೌಧಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು.
ಸುವರ್ಣ ಸೌಧ ನಿರ್ಮಾಣಕ್ಕೆ ರೈತರು ಭೂಮಿಯನ್ನು ನೀಡಿ ಸಹಕರಿಸಿದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಂತ್ರಸ್ತ ರೈತರಿಗೆ ಶೀಘ್ರವೇ ಪರಿಹಾರವನ್ನು ವಿತರಿಸಲಾಗುವುದು ಎಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಸುಮಾರು 230 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ಸೌಧ ನಿರ್ಮಾಣವಾಗಲಿದೆ. ಸುವರ್ಣ ಭವನವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಶಾಸಕರ ಭವನ ಹೊರತುಪಡಿಸಿ ಸುವರ್ಣ ಸೌಧ ನಿರ್ಮಾಣದ 230 ಕೋಟಿ ರೂ. ಅಂದಾಜು ಮೊತ್ತಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪ್ರಸಕ್ತ ವರ್ಷದ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಹಲಗಾ ಮತ್ತು ಬಸ್ತವಾಡ ಗ್ರಾಮಗಳ 146 ರೈತರ ಮಾಲೀಕತ್ವದಲ್ಲಿರು ಖಾಸಗಿ ಜಮೀನುಗಳ ಭೂ ಸ್ವಾಧೀನಕ್ಕಾಗಿಯೂ ಹಣ ಕಾಯ್ದಿರಿಸಲಾಗಿದೆ.
ಮುಖ್ಯಮಂತ್ರಿ ವಿರುದ್ಧ ಖರ್ಗೆ ಕಿಡಿ:
ಸುವರ್ಣಸೌಧಕ್ಕೆ ಅಡಿಗಲ್ಲು ಹಾಕುವ ಮುನ್ನವೇ ಮುಖ್ಯಮಂತ್ರಿಗಳು ಮುಹೂರ್ತ ಮಾಡಿದ ಪ್ರಸಂಗವೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಸರ್ಕಾರ ನಡೆಸುತ್ತಿರುವ ಶಿಲಾನ್ಯಾಸ ಕಾರ್ಯಕ್ರಮ ಗಿಮಿಕ್ ಎಂಬುದಾಗಿ ಪ್ರತಿಪಕ್ಷದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. |