ಭಯೋತ್ಪಾದನಾ ವಿರೋಧಿ ಅಭಿಯಾನದ ಹೆಸರಲ್ಲಿ ಆಡಳಿತರೂಢ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.ಗುರುವಾರ ಮಧ್ನಾಹ್ನ ಸದನದಲ್ಲಿ ಖರ್ಗೆಯವರು, ನಾಳೆ ಬೆಳಗಾವಿಯಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಅಭಿಯಾನಕ್ಕೆ ಯಾರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೀರಿ?, ಪ್ರತಿಪಕ್ಷಗಳ ಗಮನಕ್ಕೆ ತಂದಿದ್ದೀರಾ? ಇದಕ್ಕೆ ಹಣ ಎಲ್ಲಿಂದ ಬರುತ್ತೆ ?ಎಂಬುದಾಗಿ ಪ್ರಶ್ನಿಸಿದ್ದರು.ಅದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಸುರೇಶ್ ಕುಮಾರ್ ಅವರು, ದೇಶದಲ್ಲಿ ಭಯೋತ್ಪಾದನೆ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ, ಯುವ ಜನತೆಗೆ ದೇಶಪ್ರೇಮವನ್ನು ಮೂಡಿಸುವ ನಿಟ್ಟಿನಲ್ಲಿ ವಿವೇಕಾನಂದರ ಜನ್ಮ ಜಯಂತಿಯ ಜ.12 ರಿಂದ ಜ.23ರ ನೇತಾಜಿ ಅವರ ಜನ್ಮ ಜಯಂತಿವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎನ್ನುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಖರ್ಗೆಯವರು ಅಲ್ಲ ಸ್ವಾಮಿ, ಇದಕ್ಕೆ ಹಣ ಎಲ್ಲಿಂದ ಬರುತ್ತೆ, ಈ ಅಭಿಯಾನವನ್ನು ರಾಜ್ಯದ ಎಲ್ಲೆಡೆ ಮಾಡಿ, ಇದನ್ನು ಯಾರಲ್ಲಿ ಕೇಳಿ ಮಾಡಿದ್ದೀರಿ, ಇದು ಬಿಜೆಪಿ ಅಜೆಂಡಾ ಇದೆ ಎಂಬುದಾಗಿ ಮತ್ತೆ ಕೆಣಕಿದರು. ಆಗ ಕೆರಳಿದ ಸುರೇಶ್ ಕುಮಾರ್, ದೇಶಪ್ರೇಮದ ಕಾರ್ಯಕ್ರಮ ಮಾಡಲು ಯಾರನ್ನು ಕೇಳುವ ಅಗತ್ಯವಿಲ್ಲ, ಇದು ಸರ್ಕಾರದ ಕಾರ್ಯಕ್ರಮ ಎಂದರು.ನೀವು ಈ ರೀತಿ ಧೋರಣೆ ಹೊಂದಿದ್ದರಿಂದಲೇ ಭಯೋತ್ಪಾದನೆಗೆ ಕುಮ್ಮುಕ್ಕು ಸಿಕ್ಕಿರುವುದು, ನಿಮ್ಮ ಆಕ್ಷೇಪ ಏನು. ಗುಲ್ಬರ್ಗಾದಲ್ಲಿ ಬುದ್ದ ವಿಹಾರ ನಿರ್ಮಾಣ ಸಂದರ್ಭದಲ್ಲೂ ಸರ್ಕಾರ ನೆರವು ನೀಡಿತ್ತು, ಆಗ ನೀವು ಹೀಗೆ ಪ್ರಶ್ನೆ ಮಾಡಿದ್ದೀರಾ ಎಂದು ಸುರೇಶ್ ಕುಮಾರ್ ಧ್ವನಿ ಏರಿಸಿದಾಗ ಖರ್ಗೆ ಅವರು ಕೆಂಡಾಮಂಡಲರಾಗಿ, ಅಲ್ಲಿರುವುದನ್ನು ಕಿತ್ತುಕೊಂಡು ಹೋಗ್ರಿ, ಒಡೆದು ಹಾಕ್ರಿ ಎಂದೆಲ್ಲಾ ತಾಳ್ಮೆಗೆಟ್ಟಾಗ ಕಾಂಗ್ರೆಸ್ ಪಟಾಲಂ ಸದನದ ಬಾವಿಗಿಳಿದಾಗ ಸದನ ಗೊಂದಲದ ಗೂಡಾಯಿತು.ಏತನ್ಮಧ್ಯೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿ, ಖರ್ಗೆಯವರು ಹಿರಿಯ ಸದಸ್ಯರು, ನಿಮ್ಮ ಬಗ್ಗೆ ಗೌರವವಿದೆ. ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರವೇ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಕರಲ್ಲಿ ದೇಶಭಕ್ತಿ ಮೂಡಿಸುವುದು ಪ್ರಮುಖ ಕರ್ತವ್ಯ ಸ್ವಾಮಿ. ಹಾಗಾಗಿ ಆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಇದರಲ್ಲಿ ಆರ್ಎಸ್ಎಸ್ ಆಗಲಿ, ಬಿಜೆಪಿ ಅಜೆಂಡಾ ಇಲ್ಲ, ನಾಳೆ ನೀವೇ ಕಾರ್ಯಕ್ರಮ ಬಂದು ವೀಕ್ಷಿಸಿ. ಅಲ್ಲಿ ಮರಾಠ ಇನ್‌ಫೆಂಟ್ರಿ ಮೇಜರ್, ರಾಮಕೃಷ್ಣ ಆಶ್ರಮದ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಾರೆ. ಈ ಬಗ್ಗೆ ಏನಾದರು ಸಲಹೆ ಕೊಡುವುದಿದ್ದರೆ ಕೊಡಿ, ಅದನ್ನು ಬಿಟ್ಟು ಅನಾವಶ್ಯಕ ಮಾತನಾಡುವುದು ಬೇಡ ಎಂದು ಸಮಜಾಯಿಷಿಕೆ ನೀಡಿದರು.ಬೆಂಗಳೂರು ಉಗ್ರರ ಮುಂದಿನ ಟಾರ್ಗೆಟ್ ಅಂತ ಕೇಂದ್ರ ಸರ್ಕಾರದಿಂದ ಎಚ್ಚರಿಕೆಯ ಸಂದೇಶ ಬಂದಿದೆ. ಅಲ್ಲದೇ ಯುವ ಜನಾಂಗದಲ್ಲಿ ನಾವು ಭಯೋತ್ಪಾದನೆ ಬಗ್ಗೆ ಅರಿವು ಮೂಡಿಸಲೇಬೇಕಾಗಿದೆ. ಈ ವಿಷಯದಲ್ಲಿ ರಾಜಕಾರಣ ಆಮೇಲೆ ಮಾಡೋಣ, ಮೊದಲು ದೇಶ ಉಳಿಸೋಣ ಎಂದು ಖಾರವಾಗಿ ನುಡಿದ ಮುಖ್ಯಮಂತ್ರಿಗಳು, ಭಯೋತ್ಪಾದನೆಗೆ ರಕ್ಷಣೆ ಕೊಡುವುದು ನಿಮ್ಮ ಅಜೆಂಡವಾದರೆ, ಭಯೋತ್ಪಾದನೆ ಮಟ್ಟ ಹಾಕುವುದು ನಮ್ಮ ಅಜೆಂಡಾ ಎಂದು ಖಾರವಾಗಿಯೇ ಹೇಳಿದರು.ಅಷ್ಟರಲ್ಲಿ ಮತ್ತೆ ಪ್ರತಿಪಕ್ಷ ಹಾಗೂ ಆಡಳಿತರೂಢ ಪಕ್ಷಗಳ ಸದಸ್ಯರ ಏರುಧ್ವನಿಯಿಂದಾಗಿ ಸದನ ಗೊಂದಲದ ಗೂಡಾಯಿತು.ಕಾಂಗ್ರೆಸ್ ಮಾತ್ರ ಸ್ವಾತಂತ್ರ್ಯ ತಂದಿಲ್ಲ: ಆರೋಪ-ಪ್ರತ್ಯಾರೋಪಗಳ ನಡುವೆಯೇ ಎದ್ದುನಿಂತ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನಿಂದಲೇ ಮಾತ್ರ ಸ್ವಾತಂತ್ರ್ಯ ಬಂದಿಲ್ಲ. ಬಾಲಗಂಗಾಧರ್ ತಿಲಕ್ ಕಾಂಗ್ರೆಸ್ಸಾ? ಭಗತ್ ಸಿಂಗ್ ಕಾಂಗ್ರೆಸ್ಸಾ? ಚಂದ್ರಶೇಖರ್ ಆಜಾದ್ ಕಾಂಗ್ರೆಸ್ಸಾ? ಸಾವರ್ಕರ್ ಕಾಂಗ್ರೆಸ್ಸಾ? ಕಾಂಗ್ರೆಸ್ ಮಾತ್ರ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂಬ ಅಹಂಕಾರ ಬಿಟ್ಟು ಬಿಡಿ ಎಂದು ತರಾಟೆಗೆ ತೆಗೆದುಕೊಂಡರು. |