ಗಡಿ ವಿವಾದವನ್ನು ಕೆದಕುವ ಮೂಲಕ ವಿವಾದದ ಕಿಚ್ಚನ್ನು ಹಚ್ಚುತ್ತಿರುವ ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮಹಾಜನ್ ವರದಿ ಅಂಗೀಕಾರಕ್ಕೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ಈ ಹಿಂದಿನ ಅಧಿವೇಶನದಲ್ಲೂ ಪಕ್ಷ ಭೇದ ಮರೆತು ಆ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಹಾಗಾಗಿ ಮತ್ತೊಂದು ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಕಳುಹಿಸಲು ಸರ್ಕಾರ ಸಿದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಗಡಿವಾದ ಮತ್ತೊಮ್ಮೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಹಾಗೂ ಮಹಾರಾಷ್ಟ್ರ ಖ್ಯಾತೆ ತೆಗೆದು ರಾಜಕಾರಣ ಮಾಡುತ್ತಿರುವುದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಮಹಾಜನ್ ವರದಿ ಅಂಗೀಕಾರ ಕುರಿತು ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ತಾವು ಕೂಡ ಸಾಥ್ ನೀಡುವುದಾಗಿ ಪ್ರತಿಪಕ್ಷಗಳು ಕೂಡ ಬೆಂಬಲ ಸೂಚಿಸಿವೆ. |