ಮಂಗಳೂರು ಹೊರವಲಯದಲ್ಲಿ ಆಟೋವೊಂದಕ್ಕೆ ಆಕಸ್ಮಿಕ ಬೆಂಕಿ ಹಿಡಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂರು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಗುರುವಾರ ನಡೆದಿದೆ.
ನಗರದ ಹೊರವಲವಾಗಿರುವ ಕಣ್ಣೂರಿನ ಬೋರು ಗುಡ್ಡೆಯ ಮನೆಯೊಂದರ ಹಿಂದೆ ನಿಲ್ಲಿಸಿದ್ದ ಆಟೋಕ್ಕೆ ಬೆಂಕಿ ಹೊತ್ತಿದ ಪರಿಣಾಮ ಅದರಲ್ಲಿ ಕುಳಿತಿದ್ದ ಪೌಜಿ (23 ವರ್ಷ), ಶಿಬಾ(3 ವರ್ಷ) ಹಾಗೂ ನೌರಿಷ್ (6 ವರ್ಷ) ಸಜೀವವಾಗಿ ದಹನವಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಟೋಗೆ ಯಾವ ರೀತಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆದರೆ ಆಟೋದಲ್ಲಿ ಸೀಮೆ ಎಣ್ಣೆಯ ಕ್ಯಾನ್‌ನ ಅವಶೇಷ ದೊರೆತಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಘಟನೆ ಹೇಗೆ ನಡೆಯಿತು, ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೇ ಎಂಬುದು ತನಿಖೆಯ ನಂತರವಷ್ಟೇ ಖಚಿತವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. |