ಬೆಂಗಳೂರು ಮಹಾನಗರದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿ ಜಾರಿಗೊಳಿಸುವ ಸಂಬಂಧ ಸರ್ಕಾರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಧರಣಿ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.
ನಗರವಾಸಿಗಳಿಗೆ ಹೊರೆಯಾಗಿರುವ ಈ ವಿಧೇಯಕವನ್ನು ಜಾರಿಗೊಳಿಸದೆ ಜಂಟಿ ಸಲಹೆ ಸಮಿತಿಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಮಾಡಿದ ಮನವಿಯನ್ನು ಸರ್ಕಾರ ತಿರಸ್ಕರಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಏಳು ನಗರಸಭೆ ಹಾಗೂ 110ಗ್ರಾಮಗಳು ಸೇರಿರುವುದರಿಂದ ಇಡೀ ನಗರಕ್ಕೆ ಏಕರೂಪದ ತೆರಿಗೆ ಪದ್ದತಿಯನ್ನು ಜಾರಿಗೊಳಿಸುವ ಸಂಬಂಧ ಈ ವಿಧೇಯಕ ಮಂಡಿಸಲಾಗಿದೆ ಎಂದು ಸಾರಿಗೆ ಸಚಿವ ಅಶೋಕ್ ವಿಧೇಯಕದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಮೌಲ್ಯಾಧಾರಿತ ತೆರಿಗೆ ಪದ್ದತಿಯನ್ನು ಕೈಬಿಟ್ಟು ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಎದುರಾಗಿದ್ದ ಎಡರು-ತೊಡರು ನಿವಾರಿಸಲು ವಿಧೇಯಕ ಮಂಡಿಸಲಾಗಿದೆ ಎಂದು ಹೇಳಿದರು. |