ಭಯೋತ್ಪಾದನಾ ವಿರೋಧಿ ಅಭಿಯಾನದ ವಿಷಯ ಗುರುವಾರ ಸದನದಲ್ಲಿ ಕೋಲಾಹಲ ಎಬ್ಬಿಸಿದ ನಂತರ ಮತ್ತೆ ಇಡೀ ಸದನದಲ್ಲಿ ಪ್ರತಿಧ್ವನಿಸಿದ್ದು ಗಣಿ ಹಗರಣ.
' ಇಡೀ ಕುಟುಂಬದಿಂದಾಗಿ ರಾಜ್ಯ ಎಕ್ಕುಟ್ಟಿ ಹೋಗಿದೆ' ಹೀಗೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ದ ಸಚಿವ ಜನಾರ್ದನ ರೆಡ್ಡಿ ಮಾಡಿದ ಆರೋಪದ ಪರಿ ಇದು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಸಿದ್ದರಾಮಯ್ಯನವರಂತಹ ನಾಯಕರನ್ನು ರಾಜಕಾರಣದಲ್ಲಿ ಏನು ಮಾಡಿದ್ದೀರಿ ಎಂದು ಜನತೆಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಒಂದು ಹಂತದಲ್ಲಿ, ಚಪ್ಪಲಿಯಿಂದ ಹೊಡೆಯಿಸಿ, ಹೀನ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾದವರು ಎಂಬುದಾಗಿಯೂ ಪರೋಕ್ಷವಾಗಿ ದೇವೇಗೌಡರ ವಿರುದ್ಧವೂ ಕಿಡಿಕಾರಿದರು.
ಆ ಸಂದರ್ಭದಲ್ಲಿ ಎದ್ದು ನಿಂತ ಕುಮಾರಸ್ವಾಮಿಯವರು, ಸಚಿವರಾದವರಿಗೆ ಸದನದಲ್ಲಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು ಎಂದು ತಿರುಗೇಟು ನೀಡಿದ ಅವರು, ಬಳ್ಳಾರಿಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಾಹನಕ್ಕೆ ಬೆಂಕಿ ಹಚ್ಚಿದವರಿಂದ ರಾಜಕಾರಣದ ನೀತಿ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಹರಿಹಾಯ್ದರು.
ಜಟಾಪಟಿಯ ಸಂದರ್ಭ: ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಗಣಿ ಕುರಿತು ಚರ್ಚಿಸುತ್ತಿರುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕುಮಾರಸ್ವಾಮಿ, ಗಣಿಯಲ್ಲಿ ತಾನು ಸಾಚಾ, ಗಣಿ ಲಂಚ ಹಗರಣದ ಬಗ್ಗೆ ಹೇಳುತ್ತಿರುವ ರೆಡ್ಡಿ, ಬಳ್ಳಾರಿಯಲ್ಲಿ ನಮ್ಮ ಕನ್ನಡ ನಾಡು ಎಂಬ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅದು ಬ್ಲ್ಯಾಕ್ ಮೇಲ್ ಮಾಡಲೆಂದೇ ಹುಟ್ಟಿಕೊಂಡ ಪತ್ರಿಕೆ. ಅದರಲ್ಲಿ ಅವಹೇಳನಕಾರಿಯಾಗಿ ಬರೆದ ವರದಿಯೊಂದಕ್ಕೆ ಅಲ್ಲಿನ ಜಿಲ್ಲಾ ನ್ಯಾಯಾಲಯ 5 ಸಾವಿರ ರೂ.ಗಳ ದಂಡ ವಿಧಿಸಿತ್ತು. ಸಾಮಾನ್ಯ ಕಾನ್‌ಸ್ಟೇಬಲ್ ಒಬ್ಬರ ಮಗನಾಗಿ ಹುಟ್ಟಿ, ಸಾವಿರಾರು ಕೋಟಿ ಒಡೆಯ ಎಂದು ಅವರೇ ಹೇಳಿದ್ದಾರೆ. ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಗ ಎಂದಾಗ ಜನಾರ್ದನ ರೆಡ್ಡಿ ಹಾಗೂ ಕುಮಾರಸ್ವಾಮಿ ಅವರ ನಡುವಿನ ವಾಗ್ದಾಳಿ ತಾರಕ್ಕೇರಿತ್ತು.
ನಾನು ನ್ಯಾಯಾಲಯಕ್ಕೆ ದಂಡ ಕಟ್ಟಿದ ಬಗ್ಗೆ ರಶೀದಿ ತೋರಿಸಿ, ನಾಳೆ ಬೆಳಿಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಗಣಿ ಲಂಚ ಹಗರಣ ಮಾಡಿದ ಮೇಲೆಯೇ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯಕ್ಕೆ ತೆರಳಿದ್ದರು. ನೀವೇನು ಸಾಚಾ ಅಲ್ಲ, ಯಾರು ಸತ್ಯ ಹರಿಶ್ಚಂದ್ರನ ಮೊಮ್ಮಗ, ಯಾರು ಸುಳ್ಳು ಹರಿಶ್ಚಂದ್ರನ ಮೊಮ್ಮಗ ಎಂಬುದು ಈ ರಾಜ್ಯದ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ನಾನು ಬ್ಲ್ಯಾಕ್ ಮೇಲ್ ಪತ್ರಿಕೆ ಮಾಡಿ ಕ್ಲಿಕ್ ಆಗಿರಬಹುದು, ನೀವು ಇಡೀ ರಾಜ್ಯ ಜನರನ್ನೇ ಬ್ಲ್ಯಾಕ್ ಮೇಲ್ ಮಾಡುವ ಅಂತ ಟಿವಿ ಚಾನೆಲ್ ಮಾಡಿದ್ದೀರಲ್ಲ, ಆದರೆ ನೀವು ಕ್ಲಿಕ್ ಆಗಿಲ್ಲ ಎಂದು ಕುಟುಕಿದ ಜನಾರ್ದನ ರೆಡ್ಡಿ, ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ನಾನು ದಂಡ ಕಟ್ಟಿದ ರಶೀದಿ ತೋರಿಸಿ ಎಂದು ಪಟ್ಟು ಹಿಡಿದಾಗ. ಪ್ರತಿಪಕ್ಷಗಳ ಸದಸ್ಯರು ಸದನದ ಕಲಾಪ ಇಬ್ಬರ ವೈಯಕ್ತಿಕ ಜಗಳಕ್ಕೆ ಸೀಮಿತವಾಗಿದೆ ಎಂದು ಆಕ್ಷೇಪ ವ್ಯಕ್ತವಾದ ನಂತರ, ಮಲ್ಲಿಕಾರ್ಜುನ ಖರ್ಗೆಯವರು ಗಣಿ ಕುರಿತ ತಮ್ಮ ಚರ್ಚೆಯನ್ನು ಮುಂದುವರಿಸಿದರು. |