ಆನೆಗೊಂದಿ-ಹಂಪಿಯನ್ನು ಸಂಪರ್ಕಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಸೇತುವೆ ಗುರುವಾರ ರಾತ್ರಿ ಕುಸಿದು ಬಿದ್ದಿದ್ದು, ಸ್ಥಳೀಯರ ಮೂರು ದಶಕಗಳ ಕನಸು ಭಗ್ನಗೊಂಡಂತಾಗಿದೆ. ಅಲ್ಲದೇ ಸೇತುವೆಯ ಅವಶೇಷಗಳಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದುರಂತದಲ್ಲಿ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿರಬಹುದೆಂದು ಜಿಲ್ಲಾಡಳಿತ ಶಂಕಿಸಿದೆ. ಆದರೆ ಸಾವಿನ ಸಂಖ್ಯೆ ಕುರಿತು ಈವರೆಗೂ ನಿಖರ ಮಾಹಿತಿ ಇಲ್ಲ. ಸೇತುವೆಯ ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿರಬಹುದೆಂದು ಶಂಕಿಸಲಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸೇತುವೆ ಮೇಲೆ ನಿಂತಿದ್ದ ಟ್ರಾಕ್ಟರ್, ಕೆಲ ಯಂತ್ರಗಳು, 2 ಬೈಕ್ಗಳೂ ನೀರು ಪಾಲಾಗಿವೆ.
ಈ ದುರ್ಘಟನೆ ನಡೆದ ಸಂದರ್ಭದಲ್ಲಿ ಎಷ್ಟು ಕಾರ್ಮಿಕರಿದ್ದರು ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಗಾಯಗೊಂಡ ಹಲವರನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲು ಕಿಲೋಮೀಟರ್ ಉದ್ದದ ಸೇತುವೆಯ ಒಂದು ಭಾಗ ಸುಮಾರು 10 ವರ್ಷದ ಹಿಂದೆಯೇ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿಂದ ಮರು ನಿರ್ಮಾಣ ಮಾಡಲಾಗುತ್ತಿತ್ತು. ಈ ಘಟನೆಗೆ ಕಳಪೆ ಕಾಮಗಾರಿಯೇ ಕಾರಣವೆಂಬುದು ಸ್ಥಳೀಯರ ಆರೋಪವಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಘಟನೆಯಲ್ಲಿ ಸುಮಾರು 15 ಮಂದಿ ಬಲಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸೇತುವೆ ಕುಸಿದು 10ಗಂಟೆ ಕಳೆದರೂ ಶವವನ್ನು ಪತ್ತೆ ಮಾಡುವ ಕಾರ್ಯಾಚರಣೆ ನಿಧಾನವಾಗಿ ಪ್ರಾರಂಭಗೊಂಡ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳಿಲ್ಲದ್ದರಿಂದ ಕಾರ್ಯಾಚರಣೆ ನಿಧಾನವಾಗಿ ಸಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಶ್ರೀರಾಮುಲು, ನಿರ್ಮಾಣ ಹಂತದಲ್ಲಿದ್ದ ತಳವಾರ ಘಟ್ಟ ತೂಗು ಸೇತುವೆ ಕುಸಿತಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. |