ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ಕರ್ನಾಟಕ ವ್ಯವಸ್ಥಿತ ಅಪರಾಧಗಳ ಕಾಯ್ದೆಗೆ (ಕೋಕಾ) ತಿದ್ದುಪಡಿ ತರುವ ಮಸೂದೆಯನ್ನು ಗೃಹ ಸಚಿವ ವಿ.ಎಸ್.ಆಚಾರ್ಯ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಭಯೋತ್ಪಾದನಾ ಕೃತ್ಯವನ್ನು ಒಂದು ವ್ಯವಸ್ಥಿತ ಅಪರಾಧ ಎಂಬುದಾಗಿ ಪರಿಗಣಿಸಲಾಗಿದ್ದು, ಅದಕ್ಕೆ ಅನುಕೂಲವಾಗುವಂತೆ ಕೋಕಾಗೆ ತಿದ್ದುಪಡಿ ತರಲಾಗಿದೆ. ಭಯೋತ್ಪಾದನಾ ಕೃತ್ಯ ಎಸಗಿದರೆ, ಭಯ ಹುಟ್ಟಿಸುವಂಥ ಕೃತ್ಯ ಎಸಗಿದ್ದಕ್ಕಾಗಿ ಮರಣ ದಂಡನೆ, ಅಜೀವ ಕಾರಾಗೃಹ ಶಿಕ್ಷೆ ಹಾಗೂ 10ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ತನಿಖೆ ನಡೆಯುತ್ತಿರುವಾಗ ಆಪಾದಿತನ ಆಸ್ತಿಯನ್ನು ಜಪ್ತಿ ಮಾಡಲೂ ಅವಕಾಶವಿದೆ. ದೋಷಾರೋಪಣಾ ಪಟ್ಟಿಯನ್ನು ದಾಖಲು ಮಾಡುವುದಕ್ಕಾಗಿ ಇರುವ ಅವಧಿಯನ್ನು 180ದಿನಗಳಿಂದ ಒಂದು ವರ್ಷದವರಗೆ ವಿಸ್ತರಿಸಲಾಗಿದೆ.
ದಂಗೆ ಉತ್ತೇಜಿಸುವ, ಆರ್ಥಿಕ ಪ್ರಯೋಜನ ಪಡೆಯುವ, ಹಣಕಾಸಿನ ಅಥವಾ ಇತರ ಅನುಕೂಲ ಪಡೆಯುವ ಉದ್ದೇಶದಿಂದ ಅಥವಾ ಹಿಂಸೆಯ ಮೂಲಕ, ಭಯೋತ್ಪಾದನೆ, ಬಲಾತ್ಕಾರ ಅಥವಾ ಕಾನೂನು ಬಾಹಿರ ಕೃತ್ಯಗಳನ್ನು ಎಸಗುವವರು ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. |