ರಾಜ್ಯದಲ್ಲಿ ಮಾಣಿಕ್ ಚಂದ್ ಗುಟ್ಕಾ ತಯಾರಿಕೆ, ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಾಣಿಕ್ ಚಂದ್ ಗುಟ್ಕಾದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಅಂಶಗಳಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರ್ ಮತ್ತು ನ್ಯಾ| ವಿ,ಜಿ. ಸಭಾಹಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಡಿಕೆಯಲ್ಲಿ ಮ್ಯಾಗ್ನಿಶಿಯಂ ಕಾರ್ಬೋನೇಟ್ ಅಂಶವಿಲ್ಲ. ಆದರೆ ಮಾಣಿಕ್‌ಚಂದ್ ಗುಟ್ಕಾದಲ್ಲಿ ಈ ಅಂಶವಿದೆ. ಇದು ಮಾನವನ ಜೀವಕ್ಕೆ ಹಾನಿಕಾರಕ. ಮೇಲಾಗಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೂಡ ಇದಕ್ಕೆ ದಾಸರಾಗುತ್ತಿದ್ದಾರೆ ಎಂಬ ಕೇಂದ್ರ ಸರ್ಕಾರದ ಸಾರ್ವಜನಿಕ ಆರೋಗ್ಯ ಸಂಸ್ಥೆ ಸಲ್ಲಿಸಿದ್ದ ವರದಿಯನ್ವಯ ನ್ಯಾಯಪೀಠ ಮಾಣಿಕ್ ಚಂದ್ ನಿಷೇಧಿಸಿ ಆದೇಶ ಹೊರಡಿಸಿದೆ.
2006ರಲ್ಲೇ ಮಾಣಿಕ್‌ಚಂದ್ ಗುಟ್ಕಾದಲ್ಲಿ ಹಾನಿಕಾರಕವಾದ ಮ್ಯಾಗ್ನಿಶಿಯಂ ಕಾರ್ಬೊನೇಟ್ ಅಂಶ ಇರುವುದು ಕಂಡುಬಂದಿತ್ತು. ಈ ಬಗ್ಗೆ ಮಹಾರಾಷ್ಟ್ರಕ್ಕೂ ದೂರು ನೀಡಲಾಗಿತ್ತು. ಅಲ್ಲದೆ ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. |