ಮರಾಠಿ-ಕನ್ನಡಿಗರ ಸಂಘರ್ಷ ಮತ್ತೆ ಮುಂದುವರಿದಿದ್ದು, ಮರಾಠಿಗರ ತಂಟೆಯಿಂದ ಆಕ್ರೋಶಿತಗೊಂಡಿರುವ ಕನ್ನಡಿಗರೂ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಮತ್ತು ಗದಗ್‌ನಲ್ಲಿ ಬ್ಯಾಂಕ್ ಮೇಲೆ ದಾಳಿ ನಡೆಸಿದ್ದಾರೆ.
ಕೋಲಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ರಸ್ತೆ ತಡೆ, ಮೆರವಣಿಗೆ, ಪ್ರತಿಕೃತಿ ದಹನ ಮಾಡಿದ್ದಾರೆ. ಗದಗದಲ್ಲಿರುವ ಮಹಾರಾಷ್ಟ್ರ ಬ್ಯಾಂಕ್‌ವೊಂದರ ಮೇಲೂ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ ನಾರಾಯಣ ಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಸಂಬಂಧ 20 ಮಂದಿಯನ್ನು ಬಂಧಿಸಿದ್ದಾರೆ. ಇದರ ನಡುವೆಯೇ ಪ್ರತಿಭಟನಾಕಾರರು ಬ್ಯಾಂಕ್‌ನ ನಾಮಫಕಲಕ್ಕೆ ಮಸಿ ಬಳಿದರು.
ಈ ನಡುವೆ ಕರವೇ ಕಾರ್ಯಕರ್ತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವುದಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. |