ಭ್ರಷ್ಟಾ ಅಧಿಕಾರಿಗಳ ವಿರುದ್ಧ ಬೇಟೆಯನ್ನು ಮುಂದುವರಿಸಿರುವ ಲೋಕಾಯುಕ್ತ, ಶುಕ್ರವಾರ ಬೆಳಿಗ್ಗೆ ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರು, ಮೈಸೂರು, ಹಾವೇರಿ, ರಾಯಚೂರಿನಲ್ಲಿ ಲೋಕಾಯುಕ್ತದ ರವಿಕುಮಾರ್ ನೇತೃತ್ವದ ತಂಡ ಇಂದು ಬೆಳಿಗ್ಗೆ ಏಕಕಾಲದಲ್ಲಿ ಪೊಲೀಸ್, ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ, ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.ಭ್ರಷ್ಟರ ಅಕ್ರಮ ಆಸ್ತಿಯ ಮೌಲ್ಯ ಹತ್ತು ಕೋಟಿ ರೂ.ಗಳೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ ಎಂದು ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಗೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದು, ಒಟ್ಟಾರೆ ಮೌಲ್ಯ ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದರು.ಸಿಸಿಬಿಯ ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಅವರ ಚಂದ್ರಾಲೇಔಟ್‌ನ ಬಂಗ್ಲೆ, ಹೊಸಪೇಟೆಯ ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಷಣ್ಮುಗಪ್ಪ ಕೃಷ್ಣಪ್ಪ ಅವರ ಬಸವೇಶ್ವರ ನಗರ, ರಾಜರಾಜೇಶ್ವರಿ ನಗರದ ಬಂಗಲೆ, ಸಯ್ಯದ್ ನುಸ್ರತ್ ಅಲಿ ಅವರ ದೇವದುರ್ಗದ ಮನೆ, ಪೆಟ್ರೋಲ್ ಬಂಕ್, ರಾಯಚೂರಿನಲ್ಲಿನ ಮನೆ, ಗಣಿ ಇಲಾಖೆಯ ಉಪನಿರ್ದೇಶಕ ರಾಜೀವ್ ಅವರ ಬೆಂಗಳೂರಿನ ನಿವಾಸ, ಬಿಬಿಎಂಪಿಯ ಕಿರಿಯ ಇಂಜಿನಿಯರ್ ಶಿವರಾಂ ಅವರ ಮೈಸೂರಿನ ವಿಜಯನಗರದ ಮನೆ, ಕೆ.ಆರ್.ನಗರ ಸಮೀಪದ 35ಎಕರೆ ಕೃಷಿ ಭೂಮಿ, ಬೆಂಗಳೂರಿನ ನಿವಾಸಗಳಲ್ಲದೆ ಈ ಭ್ರಷ್ಟ ಅಧಿಕಾರಿಗಳ ಕಚೇರಿಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.ದಾಳಿಗೆ ಸಿಕ್ಕಿ ಬಿದ್ದಿರುವ ಭ್ರಷ್ಟ ಅಧಿಕಾರಿಗಳು ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೆರೆಡು ಅಧಿಕಾರಿಗಳು ಮಾಡಿಕೊಂಡಿರುವ ಆಸ್ತಿ ನೋಡಿದರೆ ಗಾಬರಿ ಹುಟ್ಟಿಸುತ್ತೆ ಎಂದು ಹೇಳಿದರು.ಎಲ್ಲಾ ಏಳು ಮಂದಿ ಭ್ರಷ್ಟ ಅಧಿಕಾರಿಗಳ ಮೇಲೆ ಜಿಲ್ಲಾ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದ ಅವರು, ಈ ವರ್ಷ ಭ್ರಷ್ಟರ ವಿರುದ್ಧ ನಡೆದ ಅತಿದೊಡ್ಡ ದಾಳಿ ಇದಾಗಿದೆ ಎಂದು ತಿಳಿಸಿದರು.ಅರಣ್ಯ ಇಲಾಖೆಯ ಡಿಐಜಿಯಾಗಿರುವ ಎಂ.ಸಿ.ನಾರಾಯಣಗೌಡ ಅವರು ಈ ಹಿಂದೆ ಸಾರಿಗೆ ಆಯುಕ್ತರಾಗಿ ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದು, ಆ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಸಂಪಾದಿಸಿರುವುದು ದಾಳಿಯಲ್ಲಿ ಬೆಳಕಿಗೆ ಬಂದಿದ್ದು, ನಾರಾಯಣಗೌಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಆಪ್ತರಾಗಿದ್ದಾರೆ. |