ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಆಡಳಿತಾವಧಿ ಕಾಲದಿಂದ ಇತ್ತೀಚಿನವರೆಗೆ ನೀಡಲಾದ 109 ಗಣಿ ಗುತ್ತಿಗೆ ಪರವಾನಿಗೆಗಳ ಹಿನ್ನೆಲೆ ಬಗ್ಗೆ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ಮಾಡಿಸಲು ಸಿದ್ದ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.
ಇಂದು ಬೆಳಿಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಆಗಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿರೋಧ ಪಕ್ಷಗಳ ನಾಯಕರು ಒಪ್ಪುವುದಾದರೆ, ಅಕ್ರಮ ಗಣಿಗಾರಿಕೆ ಬಗ್ಗೆ ಜಂಟಿ ಸದನ ಸಮಿತಿ ರಚಿಸಲು ನಾವು ಸಿದ್ದರಿದ್ದೇವೆ ಎಂದರು.
ವಿರೋಧ ಪಕ್ಷಗಳ ನಾಯಕರು ಹಠ ಮಾಡಬಾರದು. ಗಣಿಗಾರಿಕೆ ಪರವಾನಿಗೆಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿ ತನಿಖೆ ಮಾಡಿಸುತ್ತೇವೆ. ಅದರ ಜೊತೆಗೆ ಕರ್ನಾಟಕ ಮತ್ತು ಆಂಧ್ರ ಗಡಿ ಕುರಿತು ಜಂಟಿ ಸಮೀಕ್ಷೆ ನಡೆಸುವಂತೆ ಅಧಿವೇಶನ ಮುಗಿದ ಕೊಡಲೇ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ಸಿದ್ದರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಯನ್ನು ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಿಸಿದರು. ಕುಮಾರಸ್ವಾಮಿ ಸರ್ಕಾರವಿದ್ದಾಗಲೇ ಸ್ಥಳ ಬದಲಾವಣೆ ಪ್ರಯತ್ನ ನಡೆಸಿದ ಬಿಜೆಪಿ ಮುಖಂಡರು ಅದರಲ್ಲಿ ಯಶಸ್ಸು ಕಾಣದೇ ಬಿಜೆಪಿ ಸರ್ಕಾರ ಬಂದ ಮೇಲೆ ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾದರು ಎಂದು ಆರೋಪಿಸಿದರು. |