ದೇಶಾದ್ಯಂತ ತಾಂಡವಾಡುತ್ತಿರುವ ಭಯೋತ್ಪಾದನೆ ಹಾಗೂ ಭಯೋತ್ಪಾದನೆಗೆ ಪ್ರಚೋದಿಸುವವರನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡಲು ಯುವಜನತೆ ಸಂಕಲ್ಪ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸುಭಾಷ್‌ಚಂದ್ರ ಬೋಸ್ ಅವರ 112ನೇ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಭಯೋತ್ಪಾದನಾ ವಿರೋಧಿ ವಿದ್ಯಾರ್ಥಿ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಭಯೋತ್ಪಾದನೆಯನ್ನು ಹತ್ತಿಕ್ಕಲು ಯುವಕರು ಪಣತೊಡುವಂತೆ ಒತ್ತಿ ಹೇಳಿದರು.
ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಅಮೆರಿಕ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಈ ಸಮಸ್ಯೆಯಿದೆ ಎಂದವರು ಭಯೋತ್ಪಾದನೆಯನ್ನು ಮಟ್ಟಹಾಕುವ ಅಗತ್ಯವಿದೆ ಎಂದರು.
ಇತ್ತೀಚಿನ ಮುಂಬೈ ಘಟನೆಯನ್ನು ಪ್ರಸ್ತಾಪಿಸಿದ ಅವರು ಭಯೋತ್ಪಾದನೆಯಿಂದ ದೇಶ ಸಂಕಷ್ಟದಲ್ಲಿದ್ದು, ಭಯೋತ್ಪಾದನೆಯಿಂದ ದೇಶವನ್ನು ರಕ್ಷಿಸುವ ರಕ್ಷಿಸುವ ಕೆಲಸ ಯುವಜನಾಂಗದಿಂದ ಆಗಬೇಕಿದೆ ಎಂದರು. |