ಮಾಜಿ ಪೊಲೀಸ್ ಅಧಿಕಾರಿ, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಫೆ.5 ರಂದು ಶ್ವೇತಭವನದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮ ಅವರ 'ಚಹಾಕೂಟ'ದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಒಬಾಮ ಅವರು ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಅಂಗವಾಗಿ ಉಪಾಹಾರಕ್ಕೆ ಆಹ್ವಾನಿಸಲಾಗಿರುವ ಪ್ರಪಂಚದ 160 ಮಂದಿ ಗಣ್ಯರ ತಂಡದಲ್ಲಿ ಸಾಂಗ್ಲಿಯಾನ ಕೂಡಾ ಒಬ್ಬರಾಗಿದ್ದಾರೆ. ಈ ಮೊದಲು ಬಿಲ್ ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಖ್ಯಾತ ಮಹಿಳಾ ಪೊಲೀಸ್ ಅಧಿಕಾರಿ ಕಿರಣ್ ಬೇಡಿಯವರಿಗೆ ಶ್ವೇತಭವನದಿಂದ ಆಹ್ವಾನ ಬಂದಿತ್ತು. ಆದರೆ ಅವರ ಮೇಲಾಧಿಕಾರಿಗಳು ಬೇಡಿಯವರ ಅಮೆರಿಕ ಭೇಟಿಗೆ ಕೊನೆಗಳಿಗೆಯಲ್ಲಿ ಅನುಮತಿ ನಿರಾಕರಿಸಿದ್ದರು. ಆದಾಗ್ಯೂ ಒಂದು ವರ್ಷದ ನಂತರ ಕಿರಣ್ ಬೇಡಿ ಅಮೆರಿಕಕ್ಕೆ ಭೇಟಿ ನೀಡಿದ್ದರು.
ಸಾಂಗ್ಲಿಯಾನ ಅವರಿಗೆ ಮೂರು ವಾರಗಳ ಹಿಂದೆಯೇ ಶ್ವೇತಭವನದಿಂದ ಆಹ್ವಾನ ಪತ್ರ ಬಂದಿತ್ತು. ಆಹ್ವಾನಿತರ ಪಟ್ಟಿಯಲ್ಲಿ ತಮ್ಮ ಹೆಸರು ಹೇಗೆ ಸೇರಿತು ಎಂಬುದು ಸಾಂಗ್ಲಿಯಾನ ಅವರಿಗೆ ಅಚ್ಚರಿಯಾಗಿದೆಯಂತೆ.
ನಿಜಕ್ಕೂ ಇದು ನನಗೆ ಗೊತ್ತಿರಲಿಲ್ಲ. ಎಷ್ಟು ಜನ ಬರುತ್ತಾರೆಂಬುದೂ ನನಗೆ ಗೊತ್ತಿಲ್ಲ. ಆದರೆ ಅಂದು ನಾನು ಅಲ್ಲಿರುತ್ತೇನೆ. ಮಾತನಾಡಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಬಹುಸಂಖ್ಯಾತ ಭಾರತೀಯರ ಅಭಿಪ್ರಾಯವನ್ನು ಮಂಡಿಸುತ್ತೇನೆ ಎಂದು ಸಾಂಗ್ಲಿಯಾನ ತಿಳಿಸಿದ್ದಾರೆ. ಜಾಗತಿಕ ಭಯೋತ್ಪಾದನೆಯನ್ನು ಹತ್ತಿಕ್ಕಲು ಹಾಗೂ ಮಾನವ ಹಕ್ಕುಗಳಿಗೆ ಆದ್ಯತೆ ನೀಡಲು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.
ಫೆ.2 ರಂದು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಸಾಂಗ್ಲಿಯಾನ ಒಟ್ಟು 12 ದಿನಗಳ ಕಾಲ ಪ್ರವಾಸ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. |