ಉಗ್ರರ ಭೀತಿ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ನಗರದ ಹೊಟೇಲ್‌ಗಳಿಗೆ ಭೇಟಿ ನೀಡುವ ಹಾಗೂ ತಂಗುವ ವಿದೇಶಿಯರ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ಬೃಹತ್ ಬೆಂಗಳೂರು ಹೊಟೇಲು ಸಂಘದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ನಗರದ ಹೊಟೇಲ್ ಮಾಲೀಕರಿಗೆ ಮನವಿ ಮಾಡಿದ್ದಾರೆ.
ಉಗ್ರರು ಹೊಟೇಲ್‌ಗಳನ್ನು ತಮ್ಮ ಗುರಿಯನ್ನಾಗಿಸಿಕೊಂಡಿರುವುದರಿಂದ ವಸತಿಗೃಹಗಳಿಗೆ ತಂಗಲು ಬರುವ ಯಾತ್ರಿಕರ ಮೇಲೆ ತೀವ್ರ ನಿಗಾ ಇಡಬೇಕು. ಅವರ ಹೆಸರು ವಿಳಾಸವನ್ನೊಳಗೊಂಡ ನೋಂದಣಿ ಪುಸ್ತಕದ ಪ್ರತಿಯನ್ನು ಪ್ರತಿದಿನ ಪೊಲೀಸ್ ಠಾಣೆಗೆ ಕಳುಹಿಸಬೇಕು. ಸಂಶಯಾಸ್ಪದರ ಚಲನವಲನಗಳ ಮೇಲೆ ನಿಗಾ ಇಡಲು ಲಾಡ್ಜ್, ಹೊಟೇಲ್, ವಾಣಿಜ್ಯ ಸಂಕೀರ್ಣ ಹಾಗೂ ಸಿಸಿ ಟಿವಿ ಅಳವಡಿಸುವಂತೆಯೂ ಅವರು ವಿನಂತಿಸಿದ್ದಾರೆ.
ಹೊಟೇಲ್‌ಗಳಿಗೆ ಆಗಮಿಸುವ ಕೆಲವು ವ್ಯಕ್ತಿಗಳು ಯಾವುದಾರೂ ಅಪಾಯಕಾರಿ ವಸ್ತುಗಳನ್ನು ಹೊಂದಿದ್ದಾರೆಯೇ ಎಂದು ತಪಾಸಣೆ ನಡೆಸಲು ಹೊಟೇಲುಗಳು ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿ ಅವರಿಂದ ಆಗಮಿಸುವವರ ಲಗ್ಗೇಜುಗಳನ್ನು ತಪಾಸಣೆಗೊಳಪಡಿಸಬೇಕು. ಹೊಟೇಲ್‌ಗಳಲ್ಲಿ ಒಂದು ವಾರಕ್ಕಿಂತ ಹೆಚ್ಚು ಸಮಯ ತಂಗುವವರನ್ನು ಪ್ರತಿ ದಿನ ತಪಾಸಣೆ ಗೊಳಪಡಿಸಿ ಆಯಾ ದಿನದ ವಿವರಗಳನ್ನು ಠಾಣೆಗೆ ಕಳುಹಿಸಿಕೊಡುವ ಮೂಲಕ ಭದ್ರತೆಗೆ ಪೊಲೀಸರಿಗೆ ನೆರವಾಗಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ವಿದೇಶಿ ವ್ಯಕ್ತಿಗಳಿಂದಲೂ ಭಯೋತ್ಪಾದನಾ ಚಟುವಟಿಕೆಗಳು ಉಂಟಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೊಟೇಲುಗಳಲ್ಲಿ ಉಳಿದುಕೊಳ್ಳುವ ವಿದೇಶಿ ವ್ಯಕ್ತಿಗಳ ಪಾಸ್‌ಪೋರ್ಟ್, ವೀಸಾ ಹಾಗೂ ಮೊಬೈಲ್ ಸಂಖ್ಯೆಯನ್ನು ಪಡೆದು ಠಾಣೆಗೆ ಕಳುಹಿಸಬೇಕು. ಜೊತೆಗೆ ಆ ವ್ಯಕ್ತಿಗಳನ್ನು ಭೇಟಿ ಮಾಡಲು ಬರುವವರ ಮೇಲೂ ನಿಗಾ ವಹಿಸಬೇಕು. ಈ ಸಂದರ್ಭದಲ್ಲಿ ಯಾರ ಮೇಲಾದರೂ ಸಂದೇಹ ಬಂದರೆ ಕೂಡಲೇ ಠಾಣೆಗೆ ಮಾಹಿತಿ ನೀಡಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಸಿ.ರಾವ್ ಸೂಚಿಸಿದ್ದಾರೆ.
|