ಗಡಿನಾಡಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಶನಿವಾರ ಸದನದಲ್ಲಿ ಬೆಳಿಗ್ಗೆ ಲವಲವಿಕೆಯಿಂದ ಕಾಣಿಸಿಕೊಂಡಿದ್ದ ಶಾಸಕರು, 12ಗಂಟೆ ಕಳೆಯುತ್ತಿದ್ದಂತೆಯೇ ಅಧಿವೇಶನದಲ್ಲಿ ಖಾಲಿ ಕುರ್ಚಿಗಳೆದ್ದೇ ದರ್ಬಾರು!, ಬಹುತೇಕ ಸದಸ್ಯರು ಎರಡು ಸದನಗಳಿಗೆ ಗೈರು ಹಾಜರಾಗಿ ಸ್ವಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದರ ಪರಿಣಾಮ ಇದು.
ಪತ್ನಿ ಮಕ್ಕಳು ಸಂಸಾರ ಸಮೇತ ಬೆಳಗಾವಿಗೆ ಬಂದಿದ್ದ ಶಾಸಕರು ಕೊಠಡಿ ಖಾಲಿ ಮಾಡಿ ಕ್ಷೇತ್ರಗಳತ್ತ ತೆರಳುತ್ತಿದ್ದರಿಂದ ಹೋಟೆಲ್‌ಗಳು ಖಾಲಿ, ಖಾಲಿಯಾಗಿದ್ದವು.
ಜನದಟ್ಟಣೆಯಿಂದ ಕಳೆದೊಂದು ವಾರದಿಂದ ತುಂಬಿ ತುಳುಕುತ್ತಿದ್ದ ಕುಂದಾನಗರಿಯ ಹೋಟೆಲ್, ರಸ್ತೆಗಳು ಎಂದಿನ ಸ್ಥಿತಿಗೆ ಮರಳಿದವು. ಉತ್ತರಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಭಾಗದ ಶಾಸಕರನ್ನು ಹೊರತುಪಡಿಸಿ ಮೈಸೂರು ಭಾಗದ ಬಹುತೇಕ ಶಾಸಕರು ಸದನಕ್ಕೆ ಗೈರುಹಾಜರಾಗಿ ಮನೆಯತ್ತ ಪಯಣ ಬೆಳೆಸಿದ್ದರು.
ಇದರಿಂದಾಗಿ ಸದನದಲ್ಲಿ ನಿನ್ನೆ-ಮೊನ್ನೆ ನಡೆದ ಗದ್ದಲ, ಗೌಜಿ ಕಂಡು ಬರಲಿಲ್ಲ, ಉತ್ತರ ಕರ್ನಾಟಕ ಅಭಿವೃದ್ದಿಗಾಗಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳು ಸಹ ನೀರಸವಾಗಿದ್ದವು.
ಸದಸ್ಯರ ಕಡಿಮೆ ಹಾಜರಾತಿಯಲ್ಲೂ ರಾಜ್ಯಪಾಲರ ಭಾಷಣದ ಮೇಲೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುವ ಖರ್ಗೆ, ಕುಮಾರಸ್ವಾಮಿ, ಮತ್ತಿತರರು ಮಾತನಾಡಿದರು. ಕೊನೆಯ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ ನಂತರ ಸದನದ ಕಲಾಪಕ್ಕೆ ತೆರೆ ಬಿದ್ದಿತ್ತು. |