ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪೆಯಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಅದನ್ನು ಕಚ್ಚಿ ಎಳೆದಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಎರಡು ನಾಯಿಗಳು ಸಾವನ್ನಪ್ಪಿವೆ.
ಇಂದು ಬೆಳಿಗ್ಗೆ ವೇಮಗಲ್ ಸಮೀಪದ ಕ್ಯಾಲನೂರು ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿದ್ದ ತಿಪ್ಪೆಯಲ್ಲಿ ಕಂಡು ಬಂದ ಪ್ಲಾಸ್ಟಿಕ್ ಅನ್ನು ನಾಯಿಗಳು ಮೂಸಲು ಹೋದಾಗ ಸ್ಫೋಟ ಸಂಭವಿಸಿದೆ. ಕೊಡಲೇ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಜಿಲ್ಲಾ ವರಿಷ್ಠಾಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಫಣಿಂದರ್ ಸಿಂಗ್, ಪ್ರಭಾರ ಜಿಲ್ಲಾಧಿಕಾರಿ ಬಾಬಣ್ಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹಂದಿಯನ್ನು ಓಡಿಸಲು ತಿಪ್ಪೆಯಲ್ಲಿ ಸ್ಫೋಟಕ ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಸ್ಫೋಟ ಪರಿಶೀಲನೆ ನಂತರ ಈ ಬಗ್ಗೆ ನಿಖರ ಮಾಹಿತಿ ನೀಡಬಹುದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |