ನಗರವನ್ನು ಕೇಂದ್ರವಾಗಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಅಕ್ರಮವಾಗಿ ಜನರನ್ನು ವಿದೇಶಗಳೀಗೆ ಕಳುಹಿಸುತ್ತಿದ್ದ ಅಂತಾರಾಷ್ಟ್ರೀಯ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ.
ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಏಳು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರದ ಸಯೀದಾ ಇಕ್ಬಾಲ್, ಚಿಕ್ಕಪೇಟೆಯ ರಾಯನ್ ರಸ್ತೆಯ ಸೈಯದ್, ಅಕ್ರಂ, ಹೊಸ ಭಾರತೀನಗರದ ಸಿದ್ದಿಕ್ ಹುಸೇನ್, ರಹಮತ್ ನಗರದ ಇಲಿಯಾಜ್, ವಸೀಂ ಪಾಷ, ಸೈಯದ್ ಗೌಸ್, ಜೆ.ಸಿ.ನಗರದ ಇಕ್ಬಾಲ್ ಅಹಮದ್ ಬಂಧಿತ ಆರೋಪಿಗಳು.
ಇವರಿಂದ ಕಾರುಗಳು, ಲ್ಯಾಪ್‌ಟಾಪ್‌ಗಳು, ನಕಲಿ ಪಾಸ್ಪೋರ್ಟ್‌ಗಳು, ವೀಸಾಗಳು, ನಕಲಿ ಅಂತಾರಾಷ್ಟ್ರೀಯ ಕಂಪೆನಿಗಳ ದಾಖಲೆಗಳು, ಪ್ರಿಂಟರ್ ಹಾಗೂ ವಿದೇಶಿ ಕರೆನ್ಸಿಗಳು ಮತ್ತು ವಿದೇಶಿ ಕಂಪೆನಿಗಳ ಜತೆಗಿನ ಒಪ್ಪಂದ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿದೇಶಗಳಲ್ಲೂ ವ್ಯಾಪಿಸಿರುವ ಜಾಲಕ್ಕಾಗಿ ಆರೋಪಿಗಳು ನಕಲಿ ಪಾಸ್ಪೋರ್ಟ್ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳ ಸೋಗಿನಲ್ಲಿ ವಿವಿಧ ರಾಷ್ಟ್ರಗಳ ರಾಯಭಾರ ಕಚೇರಿ ಜತೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ವೀಸಾಗಳನ್ನೂ ಪಡೆದು ಭಾರತದಿಂದ ವಿದೇಶಗಳಿಗೆ ತೆರಳಿ ಹಣ ಸಂಪಾದಿಸಿದ್ದಾರೆ. 10 ವರ್ಷಗಳಿಂದ ಬೆಳಕಿಗೆ ಬಾರದೇ ನಡೆಯುತ್ತಿದ್ದ ಈ ದಂಧೆ ಮೂಲಕ ಈವರೆಗೆ 200ಕ್ಕೂ ಅಧಿಕ ಜನರನ್ನು ಅಕ್ರಮವಾಗಿ ವಿದೇಶಗಳಿಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ. |