ನಗರದ ಬಲ್ಮಠ ಸಮೀಪದ ಪಬ್‌ವೊಂದರ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ 10ಮಂದಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಲ್ಮಠದಲ್ಲಿರುವ ಅಮ್ನೇಶಿ ಪಬ್‌ವೊಂದರಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಅರೆಬೆತ್ತಲೆ ನರ್ತನ ಮಾಡುತ್ತಿರುವ ಬಗ್ಗೆ ಮಾಲೀಕರಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು ತಕ್ಷಣವೇ ಅವರನ್ನು ಹೊರ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಪಬ್‌ನಿಂದ ನರ್ತನ ಮಾಡುತ್ತಿದ್ದವರನ್ನು ಹೊರಕಳುಹಿಸಲು ಮಾಲೀಕರು ನಕಾರ ವ್ಯಕ್ತಪಡಿಸಿದಾಗ, ಶ್ರೀರಾಮ ಸೇನೆಯ ಕಾರ್ಯಕರ್ತರು ಪಬ್ ಒಳಗೆ ನುಗ್ಗಿ ನರ್ತನದಲ್ಲಿ ತೊಡಗಿದ್ದವರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದರು.
ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಈ ಘಟನೆ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಇದೀಗ ಪಬ್ ಮಾಲೀಕರು ದೂರು ದಾಖಲಿಸಿದ್ದು, ಶ್ರೀರಾಮ ಸೇನೆಯ ಹತ್ತು ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
|